ರಾಜ್ಯ

20x30 ಬದಲಿಗೆ 30x40 ಚದರ ಅಡಿ ನಿವೇಶನಗಳ ನೀಡಿ ಎಂದು ಡಿಕೆ.ಶಿವಕುಮಾರ್ ಸೂಚನೆ; ಸಾಧ್ಯವಿಲ್ಲ ಎಂದ ಸಮಿತಿ

Manjula VN

ಬೆಂಗಳೂರು: 20x30 ಚದರ ಅಡಿ ನಿವೇಶನಗಳ ಬದಲಿಗೆ 30x40 ಚದರ ಅಡಿ, 50x80 ಚದರ ಅಡಿ ಅಳತೆಯ ನಿವೇಶನಗಳ ನೀಡುವ ಕುರಿತು ಪರಿಶೀಲಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು, ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ ರಚಿಸಲಾಗಿರುವ ಸಮಿತಿಗೆ ಶುಕ್ರವಾರ ಸೂಚನೆ ನೀಡಿದ್ದಾರೆ. ಆದರೆ, ಸೂಚನೆ ಪಾಲನೆ ಸಾಧ್ಯವಾಗುವುದಿಲ್ಲ ಎಂದು ಸಮಿತಿ ತಿಳಿಸಿದೆ.

ನಿನ್ನೆಯಷ್ಟೇ ಡಿಕೆ.ಶಿವಕುಮಾರ್ ಅವರು ಬಿಡಿಎ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಇನ್ನೂ ಮಾರಾಟವಾಗದ ಸುಮಾರು 2,500 ಫ್ಲಾಟ್‌ಗಳು ಮತ್ತು ನಿರ್ಮಾಣ ಹಂತದಲ್ಲಿರುವ 5,000 ಫ್ಲಾಟ್‌ಗಳನ್ನು ಮಾರಾಟ ಮಾಡುವ ಕುರಿತು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ಬಡಾವಣೆಯನ್ನು ನಿರ್ಮಾಣ ಮಾಡಲಾಗಿದೆ. ನಿವೇಶನಗಳ ಆಯಾಮಗಳಿಗೆ ಅನುಗುಣವಾಗಿ ರಸ್ತೆಗಳನ್ನು ರಚಿಸಲಾಗಿದೆ. ಅವುಗಳನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ಹೇಳಿದ್ದಾರೆ.

20x30 ಚದರ ಅಡಿ ವಿಸ್ತೀರ್ಣದ ನಿವೇಶನಕ್ಕೆ 20 ಅಡಿ ಅಗಲದ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ, ನಿವೇಶನದ ಅಳತೆಗೆ ಅನುಗುಣವಾಗಿ ರಸ್ತೆಗಳು ಇರಬೇಕು. ನಿವೇಶನದ ಆಯಾಮಗಳನ್ನು ಬದಲಾಯಿಸಿದರೆ, ರಸ್ತೆಗಳನ್ನು ಮರುಹೊಂದಿಸಬೇಕಾಗುತ್ತದೆ. ಬಡಾವಣೆ ಪೂರ್ಣಗೊಂಡಿರುವುದರಿಂದ ಈಗ ಅದು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಇದು ಅತೀ ದೊಡ್ಡ ಬಡಾವಣೆಯಾಗಿದ್ದು, 30,000 ನಿವೇಶನಗಳಿವೆ. ಈ ಪೈಕಿ 15,000 ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಉಳಿದ ನಿವೇಶನಗಳು 20x30 ಚದರ ಅಡಿ ವಿಸ್ತೀರ್ಣದಂತೆ 4,400 ನಿವೇಶನಗಳಿವೆ. ಅವುಗಳನ್ನು ಭೂಮಾಲೀಕರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಡಿಸೆಂಬರ್ ವೊಳಗಾಗಿ ನಿವೇಶನ ಹಂಚಿಕೆ ಮಾಡಲು ಗಡುವು ನೀಡಲಾಗಿದೆ. ಆದರೆ, ಅದು ಸಾಧ್ಯವಾಗುವುದಿಲ್ಲ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

SCROLL FOR NEXT