ರಾಜ್ಯ

ಬೆಂಗಳೂರಿನ ಆನೇಕಲ್ ಬಳಿ ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ: ಮೃತರ ಸಂಖ್ಯೆ 14ಕ್ಕೆ ಏರಿಕೆ, ಇಂದು ಸ್ಥಳಕ್ಕೆ ಸಿಎಂ ಭೇಟಿ

Sumana Upadhyaya

ಆನೇಕಲ್(ಬೆಂಗಳೂರು): ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ನಿನ್ನೆ ಶನಿವಾರ ಸಾಯಂಕಾಲ ಸಂಭವಿಸಿದ ಭಾರೀ ಪಟಾಕಿ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 

ಮೃತಪಟ್ಟ ಕಾರ್ಮಿಕರ ಪೈಕಿ ಬಹುತೇಕರು ತಮಿಳುನಾಡಿನ ಶಿವಕಾಶಿ ಮೂಲದವರಾಗಿದ್ದು ಮೃತದೇಹಗಳು ಸುಟ್ಟು ಕರಕಲಾಗಿವೆ. ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮಿನ ಮಾಲಿಕರಾದ ರಾಮಸ್ವಾಮಿ ರೆಡ್ಡಿ ಹಾಗೂ ಜಾಗದ ಮಾಲೀಕ ಅನಿಲ್ ವಿರುದ್ಧ ಅತ್ತಿಬೆಲೆ ಪೊಲೀಸ್​​ ಠಾಣೆಯಲ್ಲಿ ಐಪಿಸಿ ಸೆಕ್ಷನ್ 337, 338, 304 ಅಡಿ ಎಫ್​ಐಆರ್​​ ದಾಖಲಾಗಿದೆ.

ಐಪಿಸಿ ಸೆಕ್ಷನ್ 337 – ಇತರರ ಜೀವ ಮತ್ತು ಸುರಕ್ಷತೆಗೆ ಧಕ್ಕೆ, ಐಪಿಸಿ ಸೆಕ್ಷನ್ 338 – ಇತರರ ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಧಕ್ಕೆ ಮಾಡುವುದು. 304- ಅಪರಾಧಿ ನರಹತ್ಯೆ (ಕೊಲೆಗೆ ಸಮಾನವಲ್ಲ) 9 (ಬಿ) ಸ್ಪೋಟಕ ವಸ್ತು ಅಡಿ ಪ್ರಕರಣ ದಾಖಲಾಗಿದೆ.

ಘಟನೆ ಹೇಗಾಯಿತು?: ನಿನ್ನೆ ಶನಿವಾರ ಅಪರಾಹ್ನ 3.30ಕ್ಕೆ ಲಾರಿಯಿಂದ ಪಟಾಕಿ ಇಳಿಸಲಾಗುತ್ತಿತ್ತು. ಈ ವೇಳೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದುರಂತ ಸಂಭವಿಸಿದೆ. ಮೇಲ್ನೋಟಕ್ಕೆ ಗೋದಾಮಿನ ನಿರ್ಲಕ್ಷ್ಯದಿಂದ ಎಂದು ತಿಳಿದುಬಂದಿದೆ. ಗೋದಾಮು ಮಾಲೀಕ ಅಗ್ನಿಶಾಮಕ ನಿಯಮ ಉಲ್ಲಂಘಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಹೇಳಿದರು.

ಪಟಾಕಿ ಯಾರು ಕಳಿಸಿದ್ದಾರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಪಟಾಕಿ ಆರ್ಡರ್ ಬಂದಮೇಲೆ ಇಲ್ಲಿನ ದಾಖಲೆ ಪಡೆದು ಸಾಗಿಸಬೇಕು. ಜೊತೆಗೆ ಪಟಾಕಿ ಸಾಗಾಣಿಕೆ ವೇಳೆಯೂ ಎಸ್​​ಒಪಿ ಪಾಲಿಸಬೇಕಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಪಟಾಕಿಗಳನ್ನು ತಮಿಳುನಾಡಿನ ಧರ್ಮಪುರಿಯಿಂದ ತಂದಿರುವ ಮಾಹಿತಿ ಇದೆ. ದುರಂತ ಬಗ್ಗೆ ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಸಲಾಗುತ್ತದೆ. ಗಾಯಾಳುಗಳಿಂದಲೇ ದೂರು ಪಡೆಯಲಾಗಿದೆ. ಎಂದರು.

ಗೋದಾಮು ಮಾಲಿಕ ಪುತ್ರ ವಶಕ್ಕೆ: ಗೋದಾಮು ಮಾಲೀಕನ ಪುತ್ರ ನವೀನ್​ನ್ನು ವಶಕ್ಕೆ ಪಡೆದಿದ್ದೇವೆ. ಘಟನೆಯಲ್ಲಿ ನವೀನ್​ಗೂ ಗಾಯಗಳಾಗಿವೆ, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಪಟಾಕಿ ದುರಂತ ಸ್ಥಳದಲ್ಲಿದ್ದ ಅಧಿಕಾರಿಗಳು, ಎಫ್ಎಸ್ಎಲ್ ಹಾಗೂ ಅಗ್ನಿಶಾಮಕ ಅಧಿಕಾರಿಗಳ ವರದಿಯ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಒಂಬತ್ತು ಜನರ ಗುರುತು ಸದ್ಯಕ್ಕೆ ಸಿಕ್ಕಿದೆ. ಇನ್ನೂ ಮೂರು ಜನ ಗಂಡಸರ ಶವ ಪತ್ತೆಯಾಗಿಲ್ಲ. ಗಾಯಾಳುಗಳಲ್ಲಿ ವೆಂಕಟೇಶ ಎಂಬಾತನ ಸ್ಥಿತಿ ಗಂಭೀರವಾಗಿದೆ. 

ದುರಂತ ಸ್ಥಳಕ್ಕೆ ಇಂದು ಸಿಎಂ ಭೇಟಿ: ದುರಂತ ಸ್ಥಳಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ.

ಡಿಸಿಎಂ ಡಿ ಕೆ ಶಿವಕುಮಾರ್ ಭೇಟಿ: ಪಟಾಕಿ ದುರಂತಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಘೋಷಿಸಿದ್ದಾರೆ. ಅವರು  ನಿನ್ನೆ ರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಗೋಡೌನ್‍ಗೆ ಅನುಮತಿ ಇರಲಿಲ್ಲ, ಅಂಗಡಿಗಷ್ಟೇ ಅನುಮತಿ ಇತ್ತು. ಕಾರ್ಮಿಕರಿಲ್ಲದೇ ಗ್ರಾಹಕರು ಕೂಡ ಸಿಲುಕಿರುವ ಶಂಕೆ ಇದೆ ಎಂದು ಹೇಳಿದ್ದಾರೆ. 

ಮೃತರಲ್ಲಿ ಏಳು ಮಂದಿ ಒಂದೇ ಗ್ರಾಮದವರು: ಅಗ್ನಿ ಅವಘಡದಲ್ಲಿ ಸಜೀವವಾಗಿ ದಹನಗೊಂಡ 14 ಜನರ ಪೈಕಿ ಏಳು ಮಂದಿ ಒಂದೇ ಗ್ರಾಮದವರು ಎಂದು ತಿಳಿದುಬಂದಿದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಟಿ ಅಮ್ಮಾಪೇಟೆ ಎಂಬ ಗ್ರಾಮದ ಗಿರಿ, ಆದಿಕೇಶವನ್, ವಿಜಯ್ ರಾಘವನ್, ಇಲಂಬರದಿ, ಆಕಾಶ, ವೇಡಪನ್ ಸಚಿನ್ ಸೇರಿ ಏಳು ಯುವಕರು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

20 ಕಾರ್ಮಿಕರಿದ್ದರು: ದೀಪಾವಳಿ ಹಬ್ಬಕ್ಕಾಗಿ ಮಳಿಗೆಯಲ್ಲಿ ಹೆಚ್ಚು ಪಟಾಕಿಗಳನ್ನು ಶೇಖರಣೆ ಮಾಡಲಾಗಿತ್ತು. ಆದರೆ, ಏಕಾಏಕಿ ಪಟಾಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ದುರಂತ ಸಂಭವಿಸಿದೆ. ಮಳಿಗೆಯಲ್ಲಿ 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 6 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನವೀನ್ ಎಂಬುವವರ ಪಟಾಕಿ ಮಳಿಗೆ ಇದಾಗಿದ್ದು, ಪಟಾಕಿ ಬಾಕ್ಸ್‌ಗಳನ್ನು ತಂದು ಲಾರಿಯಿಂದ ಅನ್‌ಲೋಡ್‌ ಮಾಡುವಾಗ ಈ ಅವಘಡ ಸಂಭವಿಸಿದೆ.

SCROLL FOR NEXT