ರಾಜ್ಯ

ಐಟಿ ದಾಳಿ ತನಿಖೆ ಬಗ್ಗೆ ಅವರೇ ತೀರ್ಮಾನ ಮಾಡಿ ಎಲ್ಲಿಂದ ಹಣ ಸಿಕ್ಕಿತು ಎಂದು ಅವರೇ ಬಹಿರಂಗಪಡಿಸುತ್ತಾರೆ: ಡಾ ಜಿ ಪರಮೇಶ್ವರ್

Sumana Upadhyaya

ಬೆಂಗಳೂರು: ಕಳೆದ ವಾರ ನಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ಸಿಕ್ಕಿರುವ ಕೋಟ್ಯಂತರ ರೂಪಾಯಿ ಹಣ ಯಾರಿಗೆ ಸಂಬಂಧಿಸಿದ್ದು ಎಂದು ಕೆಲವು ಸಂದರ್ಭದಲ್ಲಿ ಅವರೇ ಬಹಿರಂಗಪಡಿಸುತ್ತಾರೆ. ಹೆಚ್ಚಿನ ತನಿಖೆ ಮಾಡಿ ಮುಂದಿನ ದಿನಗಳಲ್ಲಿ ಬಹಿರಂಗಪಡಿಸಬಹುದು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಲವು ಬಾರಿ ಐಟಿ ಇಲಾಖೆ ಅಧಿಕಾರಿಗಳು ಹಣ ಯಾರದ್ದು ಎಂದು ಬಹಿರಂಗಪಡಿಸುತ್ತಾರೆ, ಇನ್ನು ಕೆಲವು ಸಂದರ್ಭದಲ್ಲಿ ಮಾಡುವುದಿಲ್ಲ, ಅಂತೂ ವಿಚಾರ ಗೊತ್ತಾಗುತ್ತದೆ, ಈ ಬಗ್ಗೆ ನಾವು ಹೇಳಿಕೆ ನೀಡುವ ಅಗತ್ಯವಿಲ್ಲ ಎಂದರು.

ಸತೀಶ್ ಜಾರಕಿಹೊಳಿಯವರು ಶಾಸಕರ ಒಂದು ತಂಡದೊಂದಿಗೆ ವಿದೇಶಕ್ಕೆ ಟ್ರಿಪ್ ಹೋಗುವ ಬಗ್ಗೆ ಚರ್ಚೆಯಾಗುತ್ತಿದೆ ಎಂಬ ಮಾತುಗಳು ಕಾಂಗ್ರೆಸ್ ನಲ್ಲಿ ಕೇಳಿಬರುತ್ತಿದ್ದು, ಅದಕ್ಕೆ ಒಂದು ಗುಂಪು ಆಕ್ಷೇಪಣೆ ಹೇಳುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ ಎಂಬ ಮಾತಿಗೆ, ಅವರೆಲ್ಲಾ ಸ್ನೇಹಿತರ ಗುಂಪು ಸೇರಿಕೊಂಡು ಫಾರಿನ್ ಗೆ ಟ್ರಿಪ್ ಹೋಗಿ ಬರುತ್ತಾರೆ ಎಂದರೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಈ ಹಿಂದೆಯೂ ಅದೇ ರೀತಿ ಕೆಲವರು ಹೋಗಿದ್ದರಲ್ಲವೇ ಎಂದು ಕೇಳಿದರು.

ಐಟಿ ದಾಳಿ ವೇಳೆ ಸಿಕ್ಕ ಹಣದ ಬಗ್ಗೆ ತನಿಖೆ ನಡೆಸಲು ಸಿಬಿಐ ತನಿಖೆಗೆ ವಹಿಸುವ ಅಗತ್ಯವಿದೆ ಎಂದು ಅನಿಸಿದರೆ ಅವರೇ ನೀಡುತ್ತಾರೆ. ಯಾರನ್ನೂ ಕೇಳಿ ಅವರು ಮಾಡುವುದಿಲ್ಲ, ಪಂಚ ರಾಜ್ಯಗಳ ಚುನಾವಣೆಗೆ ಹಣ ಸಂಗ್ರಹ ಮಾಡಿಕೊಡಲಾಗುತ್ತಿದೆ ಎಂದು ಬಿಜೆಪಿಯವರು ಸುಮ್ಮನೆ ಹೇಳುತ್ತಾರೆ, ಅವರು ಅಧಿಕಾರದಲ್ಲಿದ್ದಾಗ ಈ ರೀತಿ ದಾಳಿಯಾಗಲಿಲ್ಲವೇ, ಐಟಿ ಇಲಾಖೆ ಅಧಿಕಾರಿಗಳಿಗೆ ಸಂಬಂಧಪಟ್ಟ ವಿಷಯವಿದು ಎಂದಷ್ಟೇ ಹೇಳಿದರು.

SCROLL FOR NEXT