ಬೆಳಗಾವಿ: ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಎಂಇಎಸ್ 'ಕರಾಳ ದಿನ'ವನ್ನು ಆಚರಿಸುವ ಭೀತಿಯ ನಡುವೆ ಕರ್ನಾಟಕ ಸರ್ಕಾರವು ಮಹಾರಾಷ್ಟ್ರದ ಮೂವರು ಸಚಿವರು ಮತ್ತು ಓರ್ವ ಸಂಸದರು ಗಡಿ ಜಿಲ್ಲೆ ಬೆಳಗಾವಿಗೆ ಪ್ರವೇಶಿಸುವುದನ್ನು ನಿಷೇಧಿಸಿ ಮಂಗಳವಾರ ಆದೇಶ ಹೊರಡಿಸಿದೆ.
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೊರಡಿಸಿರುವ ಅಧಿಕೃತ ಆದೇಶದಲ್ಲಿ, ಅಕ್ಟೋಬರ್ 31 ರಿಂದ ನವೆಂಬರ್ 2ರ ಸಂಜೆಯವರೆಗೆ ಮಹಾರಾಷ್ಟ್ರದ ಸಚಿವರಾದ ಶಂಭುರಾಜ ದೇಸಾಯಿ, ಚಂದ್ರಕಾಂತ ಪಾಟೀಲ್, ದೀಪಕ್ ಕೇಸರಕರ್ ಮತ್ತು ಸಂಸದ ಧೈರ್ಯಶೀಲ ಮಾನೆ ಅವರ ಪ್ರವೇಶವನ್ನು ನಿಷೇಧಿಸಿದ್ದಾರೆ.
ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್ ಕರಾಳ ದಿನಾಚರಣೆ ಆಚರಣೆಗೆ ಕರೆ ನೀಡಿದ್ದು, ಸಿದ್ಧತೆ ನಡೆಸಿದೆ. ಇದರಲ್ಲಿ ಪಾಲ್ಗೊಳ್ಳುವಂತೆ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಶಂಭುರಾಜೆ ದೇಸಾಯಿ, ಚಂದ್ರಕಾಂತ ಪಾಟೀಲ, ದೀಪಕ್ ಕೇಸರಕರ್ ಹಾಗೂ ಸಂಸದ ಧೈರ್ಯಶೀಲ ಮಾನೆ ಅವರಿಗೆ ಆಹ್ವಾನ ನೀಡಿದೆ.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ: ನ.1ರಂದು 'ಕರಾಳ ದಿನ' ಆಚರಣೆಗೆ ಎಂಇಎಸ್ ನಿರ್ಧಾರ; ಮಹಾ ಸಿಎಂ ಏಕನಾಥ್ ಶಿಂಧೆ ಬೆಂಬಲ
ಈ ನಾಲ್ವರು ಗಡಿಜಿಲ್ಲೆ ಬೆಳಗಾವಿಗೆ ಬಂದರೆ ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆ ಹೆಚ್ಚಿದ್ದು, ಕನ್ನಡ ಸಂಘಟನೆಗಳು ಮತ್ತಿಗೆ ಹಾಕುವ ಎಚ್ಚರಿಕೆ ನೀಡಿವೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ಮೂವರು ಸಚಿವರು ಮತ್ತು ಓರ್ವ ಸಂಸದರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳು ಮಹಾರಾಷ್ಟ್ರ ನಾಯಕರ ಪ್ರವೇಶವನ್ನು ವಿರೋಧಿಸಿ ಘೇರಾವ್ ಮಾಡುವ ಸಾಧ್ಯತೆಗಳಿವೆ. ಇದು ಕನ್ನಡಪರ ಹೋರಾಟಗಾರರು ಮತ್ತು ಎಂಇಎಸ್ ಕಾರ್ಯಕರ್ತರ ನಡುವೆ ಘರ್ಷಣೆಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತ ತಿಳಿಸಿದ್ದು, ಪರಿಸ್ಥಿತಿ ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದಿದೆ.