ರಾಜ್ಯ

ಮಹಡಿಯಿಂದ ಬಿದ್ದು ರಿಯಲ್ ಎಸ್ಟೇಟ್ ಉದ್ಯಮಿ ಸಾವು; 2ನೇ ಪತ್ನಿ ವಿರುದ್ಧ ಕೊಲೆ ಆರೋಪ ಮಾಡಿದ ಮೊದಲ ಪತ್ನಿ

Ramyashree GN

ಬೆಂಗಳೂರು: ಮಾರತ್ತಹಳ್ಳಿಯ ಎಂಪಿಎಲ್‌ ಲೇಔಟ್‌ನ ವಸತಿ ಸಮುಚ್ಚಯದ ನಾಲ್ಕನೇ ಮಹಡಿಯಿಂದ ಬಿದ್ದು ಗುರುವಾರ ಬೆಳಗ್ಗೆ 63 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಮೃತಪಟ್ಟಿದ್ದು, ಆಸ್ತಿಗಾಗಿ ಎರಡನೇ ಪತ್ನಿಯೇ ಈ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೊದಲ ಪತ್ನಿ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. 

ರಾಜಕೀಯ ಪಕ್ಷವೊಂದರ ಮುಖಂಡರಾಗಿರುವ ಸಂತ್ರಸ್ತ ಮಾರಾಂಜಿನಪ್ಪ ಘಟನೆ ಸಂಭವಿಸಿದ ವೇಳೆ ತನ್ನ ಎರಡನೇ ಪತ್ನಿಯೊಂದಿಗೆ ಇದ್ದರು. ಮೇಲಿಂದ ಕೆಳಗೆ ಬೀಳುವ ಮುನ್ನ ಅವರು ಮದ್ಯಪಾನ ಮಾಡಿದ್ದರು ಎಂದು ವರದಿಯಾಗಿದೆ.

ಅವರ ಎರಡನೇ ಪತ್ನಿ ಗೀತಾ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಮಾರಾಂಜಿನಪ್ಪ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಮೊದಲನೇ ಪತ್ನಿ ಮತ್ತು ಎರಡನೇ ಪತ್ನಿ ನಡುವೆ ಆಸ್ತಿ ವಿಚಾರವಾಗಿ ಮನಸ್ತಾಪವಿತ್ತು ಎನ್ನಲಾಗಿದೆ. ಮಾರಂಜಿನಪ್ಪ ಅವರ ಸ್ನೇಹಿತರೊಬ್ಬರು ಘಟನೆ ಬಗ್ಗೆ ಮೊದಲನೇ ಪತ್ನಿ ಉಮಾದೇವಿಗೆ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಗೆ ಹೋದಾಗ ದೇಹದ ಮೇಲೆ ಕಚ್ಚಿದ ಗುರುತುಗಳಿದ್ದು, ಕಾಲು ಮುರಿದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗೀತಾ ತನ್ನ ಗಂಡನ ಮೇಲೆ ಹಲ್ಲೆ ನಡೆಸಿ ನಾಲ್ಕನೇ ಮಹಡಿಯಿಂದ ತಳ್ಳಿದ್ದಾಳೆ ಎಂದು ಉಮಾದೇವಿ ಆರೋಪಿಸಿದ್ದಾರೆ.

ಸಂತ್ರಸ್ತ ತನ್ನ ಮೊದಲ ಪತ್ನಿ ಮತ್ತು ಮಕ್ಕಳೊಂದಿಗೆ ಬಾಗಲಕುಂಟೆಯಲ್ಲಿ ವಾಸವಾಗಿದ್ದರು. ಆದರೆ, ಕೆಲವೊಮ್ಮೆ ತನ್ನ ಎರಡನೇ ಹೆಂಡತಿಯನ್ನು ಭೇಟಿಯಾಗಲು ಅನ್ನಪೂರ್ಣೇಶ್ವರಿ ನಗರದಲ್ಲಿರುವ ಆಕೆಯ ಮನೆಗೆ ಬರುತ್ತಿದ್ದರು. 

ಕಳೆದ ನಾಲ್ಕು ವರ್ಷಗಳಿಂದ ತನ್ನ ಪತಿ ಗೀತಾ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ಉಮಾದೇವಿ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸುತ್ತಿದ್ದಾರೆ.

SCROLL FOR NEXT