ರಾಜ್ಯ

ಕಲಾಸಿಪಾಳ್ಯ ಬಸ್ ಟರ್ಮಿನಲ್‌ಗೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ, ಪರಿಶೀಲನೆ

Manjula VN

ಬೆಂಗಳೂರು: ಕಲಾಸಿಪಾಳ್ಯ ಬಸ್ ಟರ್ಮಿನಲ್‌ಗೆ ಸೋಮವಾರ ಭೇಟಿ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು, ಪರಿಶೀಲನೆ ನಡೆಸಿದರು.

ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಸೇರಿ ಅಧಿಕಾರಿಗಳೊಂದಿಗೆ ರಾಮಲಿಂಗಾ ರೆಡ್ಡಿಯವರು ಕಲಾಸಿಪಾಳ್ಯ ಬಸ್ ಟರ್ಮಿನಲ್‌ಗೆ ಭೇಟಿ ನೀಡಿದರು.

ಈ ವೇಳೆ ಸಚಿವರ ಬಳಿ ಮನವಿ ಮಾಡಿದ ಖಾಸಗಿ ಬಸ್ ಮಾಲೀಕರ ಪ್ರತಿನಿಧಿಗಳು, ಬಸ್‌ಗಳ ದೈನಂದಿನ ಬಾಡಿಗೆಯನ್ನು ಪ್ರತಿ ಬಸ್‌ಗೆ 50 ರೂ.ಗಳಿಂದ (ರೂ. 1,500/ತಿಂಗಳು) 20 ರೂ.ಗೆ ಇಳಿಸುವಂತೆ ಮನವಿ ಮಾಡಿದರು.

ಪರಿಶೀಲನೆ ಬಳಿಕ ಮಾತನಾಡಿದ ಸಚಿವರು, ಕಲಾಸಿಪಾಳ್ಯ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದರು. ಇದರಂತೆ ಬಸ್ ನಿಲ್ದಾಣಕ್ಕೆ ಬಂದು ಪರಿಶೀಲಿಸಿದ್ದೇನೆ. ಉತ್ತಮ ಸೌಲಭ್ಯಗಳಿವೆ. ಇನ್ನೂ ಕೆಲವು ಸಣ್ಣಪುಟ್ಟ ಕೆಲಸಗಳು ಆಗಬೇಕಿವೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ದೇವನಹಳ್ಳಿ ಸಂಪರ್ಕಿಸುವ ಬಿಎಂಟಿಸಿ ಬಸ್‌ಗಳಲ್ಲಿ ಈಗಾಗಲೇ ಕ್ಯುಆರ್‌ ಕೋಡ್‌ ಬಳಕೆಯಲ್ಲಿದೆ. ಆ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಶೇ 8ರಷ್ಟು ಮಂದಿ ಕ್ಯುಆರ್‌ ಕೋಡ್‌ ಬಳಸುತ್ತಿದ್ದಾರೆ. ಕ್ಯುಆರ್‌ಕೋಡ್‌ ಮೊದಲು ಆರಂಭವಾಗಿದ್ದು ಬಿಎಂಟಿಸಿಯಲ್ಲಿ. ಈಗ ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿಯಲ್ಲಿ ಈ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಖಾಸಗಿ ಬಸ್‌ಗಳಿಗೆ ಜಿಪಿಎಸ್‌ ಅಳವಡಿಸಬೇಕು ಎಂಬುದು ರಾಜ್ಯ ಸರ್ಕಾರ ಮಾಡಿದ ನಿಯಮವಲ್ಲ. ಕೇಂದ್ರ ಸರ್ಕಾರ ರೂಪಿಸಿದ ನಿಯಮ ಎಂದು ಹೇಳಿದರು.

ಸೆ.26ರಂದು ಬಿಎಂಟಿಸಿ ರಜತಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಅನುಕಂಪದ ಆಧಾರದಲ್ಲಿ 150 ಜನರಿಗೆ ಉದ್ಯೋಗ ನೀಡುವುದು, ಉತ್ತಮ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿಯನ್ನು ಗೌರವಿಸುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

SCROLL FOR NEXT