ಸಂಗ್ರಹ ಚಿತ್ರ 
ರಾಜ್ಯ

ವಿಧಾನಸಭೆಗೆ ವಿಪಕ್ಷ ನಾಯಕನ ನೇಮಿಸದ ಬಿಜೆಪಿ: ನಡ್ಡಾ, ಕಟೀಲ್, ಮುಖ್ಯ ಕಾರ್ಯದರ್ಶಿಗೆ ಲೀಗಲ್‌ ನೋಟಿಸ್‌ ಜಾರಿ

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮರಳಿ ಅಧಿಕಾರವನ್ನು ಹಿಡಿಯುವಲ್ಲಿ ಸೋತು ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ವಿರೋಧ ಪಕ್ಷದ ಸ್ಥಾನ ಗಳಿಸಿರುವ ಈವರೆಗ ವಿಪಕ್ಷ ನಾಯಕನನ್ನು ಆಯ್ಕೆ ಮಾಡದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ...

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮರಳಿ ಅಧಿಕಾರವನ್ನು ಹಿಡಿಯುವಲ್ಲಿ ಸೋತು ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ವಿರೋಧ ಪಕ್ಷದ ಸ್ಥಾನ ಗಳಿಸಿರುವ ಈವರೆಗ ವಿಪಕ್ಷ ನಾಯಕನನ್ನು ಆಯ್ಕೆ ಮಾಡದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಶನಿವಾರ ಲೀಗಲ್‌ ನೋಟಿಸ್‌ ಜಾರಿಯಾಗಿದೆ.

ಈ ಸಂಬಂಧ ವಕೀಲ ಎನ್‌ ಪಿ ಅಮೃತೇಶ್‌ ಅವರು ಬಿಜೆಪಿ ನಾಯಕರು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಲೀಗಲ್‌ ನೋಟಿಸ್‌ ನೀಡಿದ್ದಾರೆ.

ನೋಟಿಸ್‌ ದೊರೆತ ಹತ್ತು ದಿನಗಳ ಒಳಗೆ ವಿಪಕ್ಷ ನಾಯಕನ ಆಯ್ಕೆ ಮಾಡಲು ಶಾಸಕಾಂಗ ಸಭೆ ಕರೆಯುವಂತೆ ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ನಿರ್ದೇಶಿಸಬೇಕು. ವಿಪಕ್ಷ ನಾಯಕನ ಆಯ್ಕೆಯನ್ನು ವಿಳಂಬ ಮಾಡಿರುವುದಕ್ಕೆ ಕರ್ನಾಟಕದ ಜನತೆಯ ಕ್ಷಮೆ ಕೋರಬೇಕು ಎಂದು ನೋಟಿಸ್‌ನಲ್ಲಿ ಆಗ್ರಹಿಸಲಾಗಿದೆ.

ಒಂದೊಮ್ಮೆ ಇದರಲ್ಲಿ ವಿಫಲವಾದರೆ ಈ ಸಂಬಂಧ ಸಕ್ಷಮ ಪ್ರಾಧಿಕಾರ, ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯವಾಗಲಿದೆ ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮನವಿ ಸಲ್ಲಿಸಬೇಕಾದರೆ ಅವರು ಅಂತಿಮವಾಗಿ ವಿಪಕ್ಷ ನಾಯಕನ ಮೂಲಕ ಹೋಗಬೇಕಾಗುತ್ತದೆ. ಆದರೆ, ಬಿಜೆಪಿಯು ವಿಪಕ್ಷ ನಾಯಕನನ್ನು ಆಯ್ಕೆ ಮಾಡದೇ ಸಾಂವಿಧಾನಿಕ ಶೂನ್ಯ ವಾತಾವರಣ ನಿರ್ಮಿಸಿದೆ. ವಿಧಾನಸಭೆಯ ಪ್ರತಿಪಕ್ಷದ ನಾಯಕನಿಗೆ ಹಲವು ಅಧಿಕಾರ ಮತ್ತು ಕರ್ತವ್ಯಗಳಿವೆ. ಲೋಕಾಯುಕ್ತ, ಉಪಲೋಕಾಯುಕ್ತ, ಕೆಪಿಎಸ್‌ಸಿ ಸದಸ್ಯರು, ಆರ್‌ಟಿಐ ಆಯುಕ್ತರು, ಗ್ರಾಹಕರ ಒಕ್ಕೂಟ, ಆಡಳಿತಾತ್ಮಕ ನ್ಯಾಯ ಮಂಡಳಿ ಇತ್ಯಾದಿ ಸಾಂವಿಧಾನಿಕ ನೇಮಕಾತಿಗಳಲ್ಲಿ ವಿಪಕ್ಷ ನಾಯಕ ಭಾಗವಹಿಸಬೇಕು ಎಂದು ವಿವರಿಸಲಾಗಿದೆ.

ಚುನಾಯಿತ ಸರ್ಕಾರ ಸಕ್ರಿಯವಾಗಿ ಕೆಲಸ ಮಾಡದಿದ್ದಾಗ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಜನರ ಧ್ವನಿಯಾಗಿ ಕೆಲಸ ಮಾಡಬೇಕಾಗುತ್ತದೆ. ಸರ್ಕಾರದಿಂದ ದುರ್ಬಳಕೆ, ದುರಾಚಾರ, ಅಧಿಕಾರ ದುರ್ಬಳಕೆ ಇತ್ಯಾದಿ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಧ್ವನಿ ಎತ್ತುವ ಅಧಿಕಾರ ಹೊಂದಿದ್ದಾರೆ. ವಿಪಕ್ಷ ನಾಯಕನನ್ನು ಆಯ್ಕೆ ಮಾಡದೇ ಇರುವ ಮೂಲಕ ಬಿಜೆಪಿಯು ಜನರ ಧ್ವನಿಯಾಗುವಲ್ಲಿ ವಿಫಲವಾಗಿದೆ ಎಂದು ದೂರಲಾಗಿದೆ.

ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನವಾದರೂ ಬಿಜೆಪಿಯು ಪ್ರತಿಪಕ್ಷದ ನಾಯಕನ ಹುದ್ದೆಗೆ ಶಾಸಕರೊಬ್ಬರನ್ನು ನಿಯೋಜಿಸಿಲ್ಲ. ಸಾರ್ವಜನಿಕರ ಹಕ್ಕು ರಕ್ಷಿಸುವ ನಿಟ್ಟಿನಲ್ಲಿ ವಿಪಕ್ಷ ನಾಯಕನನ್ನು ನೇಮಿಸುವುದು ಬಿಜೆಪಿಯ ಕರ್ತವ್ಯವಾಗಿದೆ. ಆದರೆ, ಈ ಕರ್ತವ್ಯದಲ್ಲಿ ಬಿಜೆಪಿ ದಯನೀಯವಾಗಿ ವಿಫಲವಾಗಿದೆ ಎಂದು ಆಕ್ಷೇಪಿಸಲಾಗಿದೆ.

ಸಂವಿಧಾನದ ವಿಧಿ-ವಿಧಾನದ ಪ್ರಕಾರ ಬಿಜೆಪಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕು. ಆದರೆ, ಗೊಂದಲ-ತಳಮಳದಲ್ಲಿ ಮುಳುಗಿರುವ ಬಿಜೆಪಿ ನಾಯಕರು ಆರು ತಿಂಗಳಲ್ಲಿ ಸರ್ಕಾರ ಉರುಳಲಿದೆ. ಕಾಂಗ್ರೆಸ್‌ನ 30-40 ಶಾಸಕರು ಬಿಜೆಪಿ ಸೇರಲಿದ್ದಾರೆ. ಆಡಳಿತ ಪಕ್ಷವನ್ನು ಅಲ್ಪಮತಕ್ಕೆ ಇಳಿಸಲು ಹಲವು ಕಾಂಗ್ರೆಸ್‌ ಶಾಸಕರು ಬಿಜೆಪಿ ನಾಯಕತ್ವದ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಆಧಾರರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದೂ ದೂರಲಾಗಿದೆ.

ಸಂವಿಧಾನದ ಅಡಿಯಲ್ಲಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡದೇ ಪ್ರತಿಭಟನೆ, ಧರಣಿ ನಡೆಸುವ ಮೂಲಕ ಆಡಳಿತ ಪಕ್ಷವನ್ನು ಹಿಮ್ಮೆಟ್ಟಿಸುವ ಕೆಲಸ ಮಾಡಲು ಬಿಜೆಪಿ ಪ್ರಯತ್ನಿಸಿದೆ. ಬಿಜೆಪಿಯಿಂದ ಹಲವು ಪ್ರತಿಭಟನೆಗಳು ನಡೆದಿದ್ದು, ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಆಡಳಿತ ಪಕ್ಷಕ್ಕೆ ಸೂಕ್ತ ಕಾಲಾವಕಾಶ ನೀಡಲಾಗಿಲ್ಲ. ಬಿಜೆಪಿಯ ಪ್ರತಿಭಟನೆ, ಧರಣಿಗೆ ತಲೆಕೆಡಿಸಿಕೊಳ್ಳದ ಕಾಂಗ್ರೆಸ್‌ 100 ದಿನಗಳ ಅಧಿಕಾರವಧಿಯಲ್ಲಿ ಬಹುತೇಕ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ ಎಂದು ಸಹ ಅರ್ಜಿಯಲ್ಲಿ ವಿವರಿಸಲಾಗಿದೆ.

ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನಿಗೆ ತನ್ನದೇ ಆದ ಮಾನ್ಯತೆ ಇದೆ. ವಿಪಕ್ಷ ನಾಯಕನ ಹುದ್ದೆಗೆ ಸಂಪುಟ ದರ್ಜೆ ಸ್ಥಾನಮಾನ ಇದ್ದು, ಮಹತ್ವದ ಜವಾಬ್ದಾರಿಗಳೂ ಇವೆ. ಆಡಳಿತ ಪಕ್ಷದ ಕಾರ್ಯಭಾರವನ್ನು ಸೂಕ್ಷ್ಮ ಕಣ್ಣುಗಳ ಮೂಲಕ ಗಮನಿಸುವ ಕಾವಲು ನಾಯಿಯಂತಹ ಮಹತ್ವದ ಸ್ಥಾನವನ್ನು ಈ ಹುದ್ದೆ ಹೊಂದಿದೆ. ವಿಧಾನಸಭೆಯ ಹೊರಗೆ ಮತ್ತು ಒಳಗೆ ಸರ್ಕಾರದ ಅಕ್ರಮ, ಅನಾಚಾರ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆಯ ಬಗ್ಗೆ ಜನರ ಪರವಾಗಿ ಧ್ವನಿ ಎತ್ತಬೇಕಿದೆ. ಆದರೆ, ವಿಪಕ್ಷ ನಾಯಕನನ್ನು ಆಯ್ಕೆ ಮಾಡದಿರುವ ಮೂಲಕ ಬಿಜೆಪಿಯು ಸಾಂವಿಧಾನಿಕ ಶೂನ್ಯ ವಾತಾವರಣ ನಿರ್ಮಿಸಿದೆ ಎಂದು ಆರೋಪಿಸಲಾಗಿದೆ.

ಇದರೊಂದಿಗೆ ರಾಷ್ಟ್ರಪತಿ, ರಾಜ್ಯಪಾಲರು ಮತ್ತು ವಿಧಾನಸಭೆಯ ಸ್ಪೀಕರ್‌ ಅವರಿಗೂ ವಿಪಕ್ಷ ನಾಯಕನನ್ನು ನೇಮಿಸಲು ಬಿಜೆಪಿಗೆ ನಿರ್ದೇಶಿಸಬೇಕು ಎಂದು ಕೋರಿ ಅಮೃತೇಶ್‌ ಅವರು ಮನವಿ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

SCROLL FOR NEXT