ಮೈಸೂರು: ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯತ್ತಿದೆ. ಹೀಗಾಗಿ ಅಣೆಕಟ್ಟುಗಳಲ್ಲಿರುವ ನೀರು ಕೃಷಿ ಮಾಡಲು ಸಾಧ್ಯವಿಲ್ಲ ಎಂಬ ಆತಂಕದಿಂದ ಕಾವೇರಿ ಜಲಾನಯನಪ್ರದೇಶದ ರೈತರು ಭತ್ತದ ಕೃಷಿ ಕೈ ಬಿಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಮತ್ತು ಮದ್ದೂರಿನ ವಿಶ್ವೇಶ್ವರಯ್ಯ ನಾಲೆ, ಫೀಡರ್ ಕಾಲುವೆಗಳನ್ನು, ಹಾಗೂ ಟಿ.ನರಸೀಪುರದ ತಲಕಾಡು ಮತ್ತು ಕೊಳ್ಳೇಗಾಲ ಭಾಗದ ರೈತರು ಕಬಿನಿ ಜಲಾಶಯವನ್ನು ಅವಲಂಬಿಸಿದ್ದು ಭತ್ತದ ಬೆಳೆ ಬೆಳೆಯದಿರಲು ನಿರ್ಧರಿಸಿದ್ದಾರೆ.
ಜುಲೈ ಅಂತ್ಯದಲ್ಲಿ ಕೆಆರ್‌ಎಸ್ ಜಲಾಶಯದಲ್ಲಿನ ನೀರು 113 ಅಡಿಗಳಿಗೆ ಮತ್ತು ಕಬಿನಿ ಮಟ್ಟವು 2282 ಅಡಿಗಳಿಗೆ ಏರಿದಾಗ ಕೃಷಿ ಚಟುವಟಿಕೆಗಳು ಚುರುಕುಗೊಂಡವು, ಕೆಆರ್ ಎಸ್ ಹಾಗೂ ಕಬಿನಿ ಅಚ್ಚುಕಟ್ಟಿನಲ್ಲಿ ಅರೆಬೆಳೆ ಬೆಳೆಯಲು ತಿಂಗಳಿಗೆ 15 ದಿನ ನೀರು ಕೊಡುವುದಾಗಿ ನೀರಾವರಿ ಸಲಹಾ ಸಮಿತಿ ಭರವಸೆ ನೀಡಿದೆ. ಆದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಸರ್ಕಾರ ತಮಿಳುನಾಡಿಗೆ 25 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡುವುದರೊಂದಿಗೆ ಕೆಆರ್‌ಎಸ್ ಮಟ್ಟ 97.38 ಅಡಿಗಳಿಗೆ ಇಳಿದಿದೆ ಮತ್ತು ಕಬಿನಿ ಮಟ್ಟವು 2276.25 ಅಡಿಗೆ ಇಳಿದಿದೆ.
ಇದನ್ನೂ ಓದಿ: ಜನ, ಜಾನುವಾರುಗಳಿಗೆ ಸಂಕಷ್ಟ, ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ
ಮಂಡ್ಯ ಜಿಲ್ಲೆಯ ಮಳವಳ್ಳಿ ಮತ್ತು ಮದ್ದೂರು ತಾಲೂಕುಗಳಲ್ಲಿ ನೀರು ಬಾರದ ಹಿನ್ನೆಲೆಯಲ್ಲಿ ಭತ್ತ ಮತ್ತು ಇತರ ಕೃಷಿಗೆ ಹಿನ್ನಡೆಯಾಗಿದೆ. ಆದಾಗ್ಯೂ, ಟ್ಯಾಂಕ್‌ಗಳು ಮತ್ತು ನೀರಾವರಿ ಪಂಪ್‌ಸೆಟ್‌ಗಳಲ್ಲಿನ ನೀರನ್ನು ಅವಲಂಬಿಸಿರುವ ಕೆಲವು ಕಡೆ ಭತ್ತದ ನಾಟಿ ಮಾಡಲಾಗಿದೆ.
ಭತ್ತದ ಕೃಷಿಗೆ ಹೆಸರುವಾಸಿಯಾಗಿರುವ ತಲಕಾಡು ಭಾಗದ ರೈತರು ಬೆಳೆಗೆ ನೀರು ಸಿಗುವುದಿಲ್ಲ ಎಂಬ ಆತಂಕದಿಂದ ಭತ್ತದ ಕೃಷಿಯನ್ನು ಕೈ ಬಿಟ್ಟಿದ್ದಾರೆ. ಕೆಲವರು ದ್ವಿದಳ ಧಾನ್ಯಗಳನ್ನು ಬೆಳೆಯಲು ಪ್ರಯತ್ನಿಸಿದರೂ ಅಲ್ಪ ಮಳೆಯಿಂದ ಉತ್ತಮ ಇಳುವರಿ ಸಿಗಲಿಲ್ಲ ಎನ್ನುತ್ತಾರೆ ರೈತ ಪುರುಷೋತ್ತಮ್.
ಇದ್ನೂ ಓದಿ: ರಾಜ್ಯದ 195 ತಾಲ್ಲೂಕುಗಳಲ್ಲಿ ಬರ, ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಿ ಕೇಂದ್ರಕ್ಕೆ ವರದಿ: ಸಚಿವ ಕೃಷ್ಣ ಭೈರೇಗೌಡ
ಕೊಳ್ಳೇಗಾಲ ತಾಲೂಕಿನ ಸಿಸಳೆ, ಮುಗೂರು, ಹಲವೆಡೆ ರೈತರು ಬೆಳೆ ಉಳಿಸಿಕೊಳ್ಳಲು ಗಗನದತ್ತ ಮುಖ ಮಾಡುತ್ತಿದ್ದರೆ, ಫೀಡರ್ ಕಾಲುವೆಗಳಿಂದ ಸಾಕಷ್ಟು ನೀರಿಲ್ಲದೆ ಬೆಳೆದು ನಿಂತಿರುವ ಕಬ್ಬಿನ ಬೆಳೆಗಳು ಕೂಡ ಬಾಡುತ್ತಿವೆ.