ರಾಜ್ಯ

ಐಟಿಬಿಟಿ ಸಹಭಾಗಿತ್ವದಲ್ಲಿ 'ಸೈಬರ್‌ಸ್ಪೇರ್‌ ಸೆಂಟರ್‌ ಫಾರ್‌ ಎಕ್ಸ್‌ಲೆನ್ಸ್‌' ಕೇಂದ್ರ ರಚಿಸಲು ಚಿಂತನೆ: ಗೃಹ ಸಚಿವ

Manjula VN

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್‌ ಕ್ರೈಂ ಪ್ರಕರಣಗಳ ಮಟ್ಟಹಾಕಲು ಪೊಲೀಸರಿಗೆ ಸೂಕ್ತ ತಂತ್ರಜ್ಞಾನದ ತರಬೇತಿ ನೀಡುವ ನಿಟ್ಟಿನಲ್ಲಿ ಬೆಂಗಳೂರು ಸೈಬರ್‌ಸ್ಪೇರ್‌ ಸೆಂಟರ್‌ ಫಾರ್‌ ಎಕ್ಸ್‌ಲೆನ್ಸ್‌ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು ಬುಧವಾರ ಹೇಳಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ಐಟಿ-ಬಿಟಿ ಕಂಪೆನಿಗಳ ಮುಖ್ಯಸ್ಥರ ಜೊತೆ ಹಮ್ಮಿಕೊಂಡಿದ್ದ ಟೆಕ್‌ ಫ್ಯೂಶನ್‌ ಸನ್‌ರೈಸ್‌ ಸಮ್ಮಿಟ್‌-2023 ಪಾಲ್ಗೊಂಡು ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂದಿದೆ. ಸಾರ್ವಜನಿಕ ಸುರಕ್ಷತೆಯಿಂದ ಪೊಲೀಸ್‌ ಇಲಾಖೆಯಲ್ಲೂ ಸೈಬರ್‌ ಸೆಕ್ಯೂರಿಟಿ ಕೌಶಲ ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗಿದೆ. ಪೊಲೀಸ್‌ ಇಲಾಖೆಯಲ್ಲಿ ಎಂಜಿನಿಯರ್‌, ಎಂಎಸ್ಸಿ ಹಾಗೂ ತಾಂತ್ರಿಕ ಪದವಿ, ಸ್ನಾತಕೋತ್ತರ ಪದವಿ ಪಡೆದವರು ಇದ್ದಾರೆ. ಅಂತಹ ಅಧಿಕಾರಿಯನ್ನು ಗುರುತಿಸಿ ಐಟಿ ಕಂಪೆನಿಗಳ ಸಹಭಾಗಿತ್ವದಲ್ಲಿ ಸೈಬರ್‌ ಸೆಕ್ಯೂರಿಟಿ ಕುರಿತು ತರಬೇತಿ ನೀಡಲಾಗುತ್ತದೆ. ಅದಕ್ಕಾಗಿ ಸೈಬರ್‌ ಸ್ಪೇರ್‌ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಕೇಂದ್ರ ಸ್ಥಾಪಿಸಲಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ನಗರದ ಸುಮಾರು 40ಕ್ಕೂ ಹೆಚ್ಚು ಐಟಿ ಕಂಪನಿ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದು, ಸೈಬರ್‌ ಸುರಕ್ಷತೆ ಹಾಗೂ ತಂತ್ರಜ್ಞಾನದ ಬಗ್ಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಸಂಚಾರ ದಟ್ಟಣೆ, ಸೈಬರ್‌ ಕ್ರೈಂ ಸಮಸ್ಯೆ ಪ್ರಮುಖವಾಗಿದೆ. ಈ ಸಮಸ್ಯೆಗಳ ಪರಿಹಾರ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಪೊಲೀಸ್‌ ಇಲಾಖೆ ನಗರದಲ್ಲಿನ ಐಒಎಸ್‌ ತಂತ್ರಜ್ಞಾನ ಅಳವಡಿಕೆ, ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮೂಲಕ ದೂರು ಸ್ವೀಕರಿಸುವುದು, ಮೊಬೈಲ್‌ ಕಳ್ಳತನ ಪ್ರಕರಣವನ್ನು ಸುಲಭವಾಗಿ ದಾಖಲಿಸಲು ಮೊಬೈಲ್‌ ಆ್ಯಪ್‌ಗಳು ಹಾಗೂ ವೆಬ್‌ಸೈಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇವುಗಳ ಬಳಕೆಯಲ್ಲಿ ಯಶಸ್ವಿಯಾಗಿದ್ದೇವೆ. ಹಾಗೆಯೇ ಸಾಮಾಜಿಕ ಜಾಲತಾಣಗಳ ನಿರ್ವಹಣೆ, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು ಹೇಗೆ ರೂಪಿಸಬೇಕು ಎಂಬ ಬಗ್ಗೆಯೂ ಐಟಿ ಕಂಪೆನಿಗಳಿಂದ ಸಲಹೆ ಪಡೆಯಲಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

SCROLL FOR NEXT