ರಾಜ್ಯ

ಉಡುಪಿ: ಜನವರಿಯಿಂದ ಆಗಸ್ಟ್‌ ನಡುವೆ 11,000ಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು, ಇಬ್ಬರು ಸಾವು

Ramyashree GN

ಉಡುಪಿ: ಉಡುಪಿ ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿದ್ದು, 2023ರ ಜನವರಿ ಮತ್ತು ಆಗಸ್ಟ್ ನಡುವೆ ಎಂಟು ತಿಂಗಳಲ್ಲಿ 11,407 ಪ್ರಕರಣಗಳು ವರದಿಯಾಗಿವೆ ಎಂದು ಅಧಿಕೃತ ಅಂಕಿ ಅಂಶಗಳು ಬಹಿರಂಗಪಡಿಸಿವೆ. ಜಿಲ್ಲೆಯಲ್ಲಿ ಎಂಟು ತಿಂಗಳಲ್ಲಿ ನಾಯಿ ಕಡಿತದಿಂದ ಇಬ್ಬರು ಸಾವಿಗೀಡಾಗಿದ್ದಾರೆ.

ಸ್ಥಳೀಯ ಅಧಿಕಾರಿಗಳು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಈ ಬಗ್ಗೆ ಅಸಡ್ಡೆ ಹೊಂದಿದ್ದು, ಜಿಲ್ಲೆಯ ಹಲವು ಭಾಗಗಳಲ್ಲಿ ಬೀದಿ ನಾಯಿಗಳಿಗೆ ಸರಿಯಾಗಿ ಆಹಾರ ನೀಡದಿರುವುದು ನಾಯಿ ಕಡಿತ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ.

ಸ್ಥಳೀಯ ನಗರ ಸಂಸ್ಥೆಗಳಾದ ಸಿಎಂಸಿ, ಟಿಎಂಸಿ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಇನ್ನೂ ನಿರಂತರವಾಗಿ ಸರಿಯಾದ ರೀತಿಯಲ್ಲಿ ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಿದೆ. 

ಸಂತಾನ ಶಕ್ತಿ ಹರಣ ಮತ್ತು ಎಬಿಸಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ನಡೆಸಬೇಕು. ಪಶುಸಂಗೋಪನಾ ಇಲಾಖೆಯು ಜಿಲ್ಲೆಯಾದ್ಯಂತ ಪಂಚಾಯಿತಿಗಳಿಗೆ ಅಗತ್ಯ ತಾಂತ್ರಿಕ ಬೆಂಬಲ ನೀಡುವ ಮೂಲಕ ಸಹಕಾರ ನೀಡಲು ಸಿದ್ಧವಿದೆ ಎಂದು ಉಡುಪಿ ಜಿಲ್ಲೆಯ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ ಶಂಕರ್ ಶೆಟ್ಟಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಸಂತಾನಶಕ್ತಿ ಹರಣ ಮತ್ತು ಎಬಿಸಿ ಕಾರ್ಯಕ್ರಮಕ್ಕೆ ಟೆಂಡರ್‌ ಕರೆಯಲಾಗಿದ್ದರೂ, ಹೆಚ್ಚಿನ ಎನ್‌ಜಿಒಗಳು ಮುಂದೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಗ್ರಾಮ ಪಂಚಾಯಿತಿಗಳು ಎಬಿಸಿ ಕಾರ್ಯಕ್ರಮವನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಸೂಕ್ತ ಕ್ರಿಯಾ ಯೋಜನೆಯಿಂದ ಅಗತ್ಯ ಅನುದಾನ ಮೀಸಲಿಡಬೇಕು.

ನಾಯಿ ಕಚ್ಚಿದಾಗ ಜನರು ತಕ್ಷಣವೇ ಅಗತ್ಯ ಚಿಕಿತ್ಸೆ ಪಡೆಯಬೇಕು. ಚಿಕಿತ್ಸೆ ತಡವಾದರೆ ಸಂಕೀರ್ಣ ಸಮಸ್ಯೆಗಳು ಎದುರಾಗುತ್ತವೆ. ಸರ್ಕಾರಿ ಆರೋಗ್ಯ ಕೇಂದ್ರಗಳು ಉತ್ತಮ ಚಿಕಿತ್ಸೆ ನೀಡುತ್ತಿವೆ ಎಂದು ಉಡುಪಿ ಡಿಎಚ್‌ಒ ಡಾ. ನಾಗಭೂಷಣ ಉಡುಪ ಹೇಳಿದರು.

SCROLL FOR NEXT