ಕಲ್ಲಡ್ಕ ಪ್ರಭಾಕರ್ ಭಟ್
ಕಲ್ಲಡ್ಕ ಪ್ರಭಾಕರ್ ಭಟ್ 
ರಾಜ್ಯ

ದ್ವೇಷ ಭಾಷಣ: ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಅಭಿಯೋಜಕರಾಗಿ ಬಾಲಕೃಷ್ಣನ್ ನೇಮಕಕ್ಕೆ ಹೈಕೋರ್ಟ್‌ ನಕಾರ

Manjula VN

ಬೆಂಗಳೂರು: ದ್ವೇಷ ಭಾಷಣ ಪ್ರಕರಣದಲ್ಲಿ ಆರೋಪಿಯಾಗಿರುವ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ವಿರುದ್ಧ ಪ್ರಾಸಿಕ್ಯೂಷನ್‌ ಪರವಾಗಿ ವಾದಿಸಲು ವಕೀಲ ಎಸ್‌ ಬಾಲಕೃಷ್ಣನ್‌ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ರಾಜ್ಯ ಸರ್ಕಾರವು ಮಾರ್ಚ್‌ 7ರಂದು ಹೊರಡಿಸಿರುವ ಆದೇಶವು ವಿವೇಚನಾರಹಿತ ಮತ್ತು ಸ್ವೇಚ್ಛೆಯಿಂದ ಕೂಡಿರುವುದರಿಂದ ಅದನ್ನು ವಜಾ ಮಾಡುವಂತೆ ಕೋರಿ ಕಲ್ಲಡ್ಕ ಪ್ರಭಾಕರ್‌ ಭಟ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಸರ್ಕಾರದ ಆದೇಶಕ್ಕೆ ತಡೆ ನೀಡಲಾಗಿದ್ದು, ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡುವಂತೆ ನ್ಯಾಯಾಲಯ ಆದೇಶಿಸಿ, ವಿಚಾರಣೆ ಮುಂದೂಡಿದೆ.

ಬಾಲಕೃಷ್ಣನ್‌ ಅವರು ದೂರುದಾರೆ ನಜ್ಮಾ ನಜೀರ್‌ ಅವರ ವಕೀಲರಾಗಿದ್ದು, ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.

ಸರ್ಕಾರದ ಆಕ್ಷೇಪಾರ್ಹವಾದ ಆದೇಶದಲ್ಲಿ ಹಾಲಿ ಸರ್ಕಾರಿ ಅಭಿಯೋಜಕರನ್ನು ಏಕೆ ಬದಲಾವಣೆ ಮಾಡಲಾಗುತ್ತಿದೆ ಎಂಬುದಕ್ಕೆ ಸಕಾರಣ ನೀಡಿಲ್ಲ. ಸರ್ಕಾರವು ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲು ಕಾರಣವೇನು ಎಂಬುದನ್ನು ತಿಳಿಸಿಲ್ಲ. ಅಲ್ಲದೇ, ಈ ಪ್ರಕರಣದಲ್ಲಿ ಅಂಥ ಸಾರ್ವಜನಿಕ ಹಿತಾಸಕ್ತಿ ಏನಿದೆ ಮತ್ತು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲು ವಿಶೇಷ ಸಂದರ್ಭ ಹೇಗೆ ನಿರ್ಮಾಣವಾಗಿದೆ ಎಂಬುದನ್ನು ವಿವರಿಸಲಾಗಿಲ್ಲ ಎಂದು ಆಕ್ಷೇಪಿಸಲಾಗಿದೆ.

ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡುವಂತೆ ಪ್ರಾಸಿಕ್ಯೂಷನ್‌ನಿಂದಾಗಲಿ, ಶ್ರೀರಂಗಪಟ್ಟಣ ಪೊಲೀಸರಿಂದಾಗಲಿ ಅಥವಾ ವಿಚಾರಣಾಧೀನ ನ್ಯಾಯಾಲಯದಿಂದಾಗಲಿ ಮನವಿ, ಉಲ್ಲೇಖ ಅಥವಾ ಯಾವುದಾದರೂ ಶಿಫಾರಸ್ಸು ಆಗಿದೆಯೇ ಎಂಬುದನ್ನು ಆಕ್ಷೇಪಾರ್ಹ ಅಧಿಸೂಚನೆಯಲ್ಲಿ ವಿವರಿಸಲಾಗಿಲ್ಲ. ಯಾವುದೇ ದೃಷ್ಟಿಯಿಂದ ನೋಡಿದರೂ ವಿಶೇಷ ಸರ್ಕಾರಿ ಅಭಿಯೋಜಕರ ನೇಮಕಾತಿಯು ಸ್ವೇಚ್ಛೆ, ಅಕ್ರಮದಿಂದ ಕೂಡಿದ್ದು, ವ್ಯಾಪ್ತಿ ಮೀರಿದ ಕ್ರಮವಾಗಿದೆ. ಹೀಗಾಗಿ ಅದನ್ನು ವಜಾ ಮಾಡಬೇಕು ಎಂದು ಕೋರಲಾಗಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅರುಣ್‌ ಶ್ಯಾಮ್‌ ವಾದಿಸಿದರು. ವಕೀಲರಾದ ಸುಯೋಗ್‌ ಹೇರಳೆ ವಕಾಲತ್ತು ವಹಿಸಿದ್ದಾರೆ.

ಏನಿದು ಪ್ರಕರಣ?

ಹನುಮ ಜಯಂತ್ಯುತ್ಸವ ಅಂಗವಾಗಿ ಡಿಸೆಂಬರ್‌ 24ರಂದು ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆಯು ಆಯೋಜಿಸಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಪ್ರಭಾಕರ್‌ ಭಟ್‌ ಮುಸ್ಲಿಮರ ವಿರುದ್ಧ ಕೋಮುದ್ವೇಷದ ಭಾಷಣ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್‌ ದೂರು ನೀಡಿದ್ದರು.

ಇದನ್ನು ಆಧರಿಸಿ ಶ್ರೀರಂಗಪಟ್ಟಣ ಟೌನ್‌ ಠಾಣೆಯ ಪೊಲೀಸರು ಪ್ರಭಾಕರ್‌ ಭಟ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಮಾತುಗಳನ್ನು ಆಡುವುದು), 509 (ಮಹಿಳೆಯ ಖಾಸಗಿತನಕ್ಕೆ ಸಂಬಂಧಿಸಿದ ಮಾತುಗಳನ್ನಾಡುವುದು), 153ಎ (ಧರ್ಮದ ಆಧಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಹರಡುವುದು) ಮತ್ತು 298 (ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಿದ್ದರು.

ಭಟ್‌ ವಿರುದ್ಧ ದಾಖಲಿಸಿದ್ದ ದೂರಿನಲ್ಲಿ, ನಿಮಗೆ (ಮುಸ್ಲಿಮರಿಗೆ) ತಲಾಖ್‌ ಹೇಳುವ ಅವಕಾಶ ಇತ್ತು. ಪ್ರಧಾನಿ ಮೋದಿಯವರ ಸರ್ಕಾರದಿಂದಾಗಿ ತ್ರಿವಳಿ ತಲಾಖ್‌ ರದ್ದಾಗಿದೆ. ತ್ರಿವಳಿ ತಲಾಖ್‌ ರದ್ದುಪಡಿಸುವ ಮೂಲಕ ಅವರಿಗೆ (ಮುಸ್ಲಿಂ ಮಹಿಳೆಯರಿಗೆ) ಪರ್ಮನೆಂಟ್‌ ಗಂಡ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ. ನಿಮ್ಮಲ್ಲಿ ಯುವತಿ, ಯುವಕರು ಇಲ್ಲವೇ? ನಮ್ಮನ್ನ ಯಾಕೆ ಟಾರ್ಗೆಟ್‌ ಮಾಡುತ್ತೀರಾ? ಮೋದಿ ಸರ್ಕಾರ ಬಂದ ಮೇಲೆ ತಲಾಖ್‌ ಬಂತು. ಅವರಿಗೆ ದಿನಕ್ಕೆ ಒಬ್ಬ ಗಂಡ ಇದ್ದ, ಅವರಿಗೆ ಪರ್ಮನೆಂಟ್‌ ಗಂಡ ಇರಲಿಲ್ಲ. ಪರ್ಮನೆಂಟ್‌ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ ಎಂದು ಆಪಾದಿಸಲಾಗಿತ್ತು.

ಅಂಬೇಡ್ಕರ್‌ ದೇಶ ವಿಭಜನೆ ಮಾಡಬೇಡಿ ಎಂದಿದ್ದರು. ದೇಶ ಉಳಿಸಿಕೊಳ್ಳುವ ಮಹತ್‌ ಕಾರ್ಯ ಹಿಂದೂಗಳಿಂದ ಮಾತ್ರ ಸಾಧ್ಯ. ಮುಸ್ಲಿಮರಿಗೆ ಹಲವು ದೇಶಗಳಿವೆ. ಆದರೆ, ಹಿಂದೂಗಳಿಗೆ ಭಾರತ ಮಾತ್ರ ಇರೋದು. ಹಿಂದೂಗಳಿಗೆ ಬೇರೆ ಕಡೆ ಜಾಗ ಇಲ್ಲ. ಅದಕ್ಕಾಗಿ ನಾವು ಹೋರಾಟ ಮಾಡಬೇಕು" ಎಂದು ದೂರಿನಲ್ಲಿ ಹೇಳಲಾಗಿತ್ತು.

SCROLL FOR NEXT