ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ.ದಯಾನಂದ್
ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ.ದಯಾನಂದ್ 
ರಾಜ್ಯ

ಬೆಂಗಳೂರಿನಲ್ಲಿ ಹಿಂಸಾಚಾರ ಮುಕ್ತ, ಶಾಂತಿಯುತ ಮತದಾನವಾಗಿದೆ: ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್

Manjula VN

ಬೆಂಗಳೂರು: ಲೋಕಸಭಾ ಸಮರಕ್ಕೆ ಶಾಂತಿಯುತ ತೆರೆ ಬೀಳುವ ಮೂಲಕ ರಾಜಧಾನಿ ಪೊಲೀಸರು ನಿರಾಳರಾಗಿದ್ದಾರೆ.

ಮೊದಲ ಹಂತದಲ್ಲಿ ನಗರ ಪೊಲೀಸ್ ವ್ಯಾಪ್ತಿಯ ಐದು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು. ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಘಟನೆಗಳು ಹೊರತು ಬಹುತೇಕ ಮತದಾನವು ಶಾಂತಿಯುತವಾಗಿ ಮುಕ್ತಾಯವಾಯಿತು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (ಕೆಪಿವೈಸಿ) ಸದಸ್ಯರು ಶುಕ್ರವಾರ ಬೆಳಗ್ಗೆ ರಾಜಾಜಿನಗರದ ಮತದಾನ ಕೇಂದ್ರದಲ್ಲಿ ಚೊಂಬು (ಸಣ್ಣ ನೀರಿನ ಮಡಕೆ) ಮತ್ತು ಗ್ಯಾಸ್ ಸಿಲಿಂಡರ್‌ನೊಂದಿಗೆ ಪ್ರತಿಭಟನೆ ನಡೆಸಿದರು. ಕೆಲವೆಡೆ ಮತದಾರರಿಗೆ ಉಡುಗೊರೆ ಕಾರ್ಡ್ ವಿತರಿಸುವ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ ತಮ್ಮ ಮನೆಗಳಲ್ಲಿ ಹಣ ನೀಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದು, 'ಕಟಿಂಗ್' ಸೀನ ಎಂದು ಗುರುತಿಸಲಾದ ರೌಡಿ ಶೀಟರ್ ರಾಜಕೀಯ ಪಕ್ಷದ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.

ಘಟನೆ ಬಳಕ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಆರ್.ಆರ್.ನಗರದ ಮತಗಟ್ಟೆಯೊಂದರಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರ ಮೊದಲಕ್ಷರವನ್ನು ಸಿ.ಎಸ್.ಮಂಜುನಾಥ್ ಎಂದು ಮತಗಟ್ಟೆಯ ಪ್ರವೇಶ ದ್ವಾರದಲ್ಲಿ ಬರೆದಿದ್ದರಿಂದ ಮತದಾರರು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಚುನಾವಣಾ ಪ್ರಕ್ರಿಯೆ ಕುರಿತು ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು, ನಗರದಲ್ಲಿ ಚುನಾವಣೆ ಸಂಪೂರ್ಣವಾಗಿ ಶಾಂತಿಯುತವಾಗಿ ನಡೆದಿದೆ. ಎಲ್ಲಾ ಐದು ಸಂಸದೀಯ ಕ್ಷೇತ್ರಗಳ ಚುನಾವಣೆಯು ಸಂಪೂರ್ಣವಾಗಿ ಶಾಂತಿಯುತವಾಗಿ ನಡೆದಿದ್ದು, ಹಿಂಸಾಚಾರ ಮುಕ್ತ ಚುನಾವಣೆಯಾಗಿದೆ ಎಂದು ಹೇಳಿದ್ದಾರೆ.

ಚುನಾವಣೆಗೆ ಮುನ್ನ ರೌಡಿ ಶೀಟರ್‌ಗಳ ವಿರುದ್ಧ ಕೈಗೊಂಡ ಭದ್ರತಾ ಕ್ರಮಗಳು ಸುಗಮ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿತು. ಪ್ರತಿ ಮತಗಟ್ಟೆ ಕೇಂದ್ರದಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಪಡೆಗಳು ನಗರದ ಯಾವುದೇ ಭಾಗದಲ್ಲಿ ಅಹಿತಕರ ಘಟನೆಗಳು ವರದಿಯಾಗದಂತೆ ಕಟ್ಟೆಚ್ಚರ ವಹಿಸಿದ್ದರು. ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣದ ಸೂಕ್ಷ್ಮ ಪ್ರದೇಶಗಳಲ್ಲಿ ವೆಬ್‌ಕಾಸ್ಟಿಂಗ್ ಮತ್ತು ಅರೆಸೇನಾ ಪಡೆಗಳ ನಿಯೋಜನೆ ಕೂಡ ಸಹಾಯಕವಾಯಿತು ಎಂದು ತಿಳಿಸಿದ್ದಾರೆ.

SCROLL FOR NEXT