ಬೆಂಗಳೂರು: ಶುಕ್ರವಾರ ಸಂಜೆ ಸುರಿದ ಭಾರೀ ಮಳೆಗೆ ವಿಜಯನಗರದ ಎಂಸಿ ಲೇಔಟ್ ಬಳಿ ಮರವೊಂದು ಆಟೋ ರಿಕ್ಷಾದ ಮೇಲೆ ಬಿದ್ದು, ಚಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಶಿವರುದ್ರಯ್ಯ (49) ಮತಪಟ್ಟವರು. ಇವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಅರಣ ಉಪ ಸಂರಕ್ಷಣಾಧಿಕಾರಿ ಬಿಎಲ್‌ಜಿ ಸ್ವಾಮಿ, ಮರ ಬಿದ್ದ ಪರಿಣಾಮ ಶಿವರುದ್ರಯ್ಯ ಅವರ ತಲೆ, ಕಾಲು ಹಾಗೂ ಖಾಸಗಿ ಭಾಗಗಳಿಗೆ ಗಾಯಗಳಾಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಅಧಿಕಾರಿಗಳು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಅಲ್ಲಿಗೆ ಹೋಗುವಷ್ಟರಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಪಾಲಿಕೆ ನಿಯಮಾವಳಿಗಳ ಪ್ರಕಾರ ಸಂತ್ರಸ್ತ ಕುಟುಂಬ ಸದಸ್ಯರಿಗೆ ಪರಿಹಾರವನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಈ ವರ್ಷ ನಡೆದ ಎರಡನೇ ಘಟನೆ ಇದಾಗಿದೆ. ಆಗಸ್ಟ್ 12 ರಂದು ಸರ್ವಜ್ಞ ನಗರದ ಜೈ ಭಾರತ್ ನಗರದಲ್ಲಿ ಮರವೊಂದು ಬಿದ್ದು ನಾಲ್ವರು ಶಾಲಾ ಮಕ್ಕಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದರು. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ದ್ವಿಚಕ್ರ ವಾಹನ ಸವಾರ ಮಾಣಿಕ್ಯವೇಲ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ವಿಜಯಲಕ್ಷ್ಮಿ ಎಂಬ ಮಹಿಳೆಯ ತೊಡೆಯ ಮೂಳೆ ಮುರಿದಿದ್ದು, ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.