ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಡೆ ವಿರೋಧಿಸಿ ರಾಜ್ಯ ಕಾಂಗ್ರೆಸ್ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನೆಯಲ್ಲಿ ಡಿಕೆ ಶಿವಕುಮಾರ್, ಸಚಿವ ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್, ಬಿಕೆ ಹರಿಪ್ರಸಾದ್, ಯುಬಿ ವೆಂಕಟೇಶ್, ಸಲೀಂ ಅಹ್ಮದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು, ಕೆಪಿಸಿಸಿ ಪದಾಧಿಕಾರಿಗಳು ಭಾಗಿಯಾಗಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದರ ವಿರುದ್ಧ ಪ್ರತಿಭಟನೆ ಮುಂದುವರೆಯಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ನನ್ನ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ರಾಜ್ಯಪಾಲರ ನಿರ್ಧಾರ ಅಸಂವಿಧಾನಿಕವಾಗಿದೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು, ಪ್ರಾಸಿಕ್ಯೂಷನ್'ಗೆ ಅನುಮತಿ ನೀಡಿರುವುದು ಷಡ್ಯಂತ್ರವಲ್ಲದೆ ಮತ್ತೇನಲ್ಲ ಎಂದು ಆರೋಪಿಸಿದರು.
ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು, ನಮ್ಮ ಸರ್ಕಾರವನ್ನು ದುರ್ಬಲಗೊಳಿಸಲು ದೊಡ್ಡ ಸಂಚು ರೂಪಿಸಲಾಗಿದೆ. ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಈ ಯೋಜನೆಯ ಭಾಗವಾಗಿದ್ದಾರೆ. ಉತ್ತರಾಖಂಡ, ಜಾರ್ಖಂಡ್ ಮತ್ತು ದೆಹಲಿಯಲ್ಲಿ ಮಾಡಿದಂತೆ ಈಗ ರಾಜ್ಯದಲ್ಲೂ ಮಾಡಲು ಹೊರಟಿದ್ದಾರೆಂದು ಕಿಡಿಕಾರಿದರು.
ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, 3 ಕೆಎಸ್‌ಆರ್‌ಪಿ ತುಕಡಿ, 100 ಮಹಿಳಾ ಪೊಲೀಸ್, 10 ಪಿಎಸ್‌ಐ, 5 ಪಿಐಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಬೆಳ್ಳಂಬೆಳಗ್ಗೆಯೇ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ರಾಜ್ಯಪಾಲರ ವಿರುದ್ಧ ಧಿಕ್ಕಾರದ ಕೂಗುಗಳನ್ನು ಕೂಗಿದರು, ಅಲ್ಲದೆ, ನಗರದ ರಾಜಭವನ ಮುತ್ತಿಗೆಗೂ ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದರು.
ಈ ವೇಳೆ ರಾಜಭವನಕ್ಕೆ ಮುತ್ತಿಗೆಗೆ ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ʼಗವರ್ನರ್ ಗೋ ಬ್ಯಾಕ್ʼ ಎಂದು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.
ʼಷಡ್ಯಂತ್ರಕ್ಕೆ ಸವಾಲ್ʼ ಎಂಬ ಹೆಸರಿನಲ್ಲಿ ಇಂದು ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಆಯೋಜಿಸಿದೆ. ಪ್ರತಿಭಟನೆ ಬೆಂಗಳೂರು, ಉಡುಪಿ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ವಿಜಯಪುರ, ಕಲಬುರಗಿ, ರಾಯಚೂರು, ತುಮಕೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಮುಂದುವರೆದಿದೆ.
ಪ್ರತಿಭಟನೆ ಬಳಿಕ ಕೈಪಡೆ ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ಆಯಾ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಿದೆ.
ಈ ನಡುವೆ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕೂಡ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೊಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ವಿಜಯೇಂದ್ರ ಅವರು, ರಾಜ್ಯಪಾಲರ ಮೇಲೆ ದಬ್ಬಾಳಿಕೆ ಮಾಡುವುದು ಬಿಟ್ಟು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರು-ಮೈಸೂರು ಪಾದಯಾತ್ರೆ ವೇಳೆ ಈಗಾಗಲೇ ಮಾತನಾಡಿದ್ದೇವೆ. ತಮ್ಮ ಬೆಂಬಲಕ್ಕೆ ಸಚಿವರು, ಶಾಸಕರು ನಿಲ್ಲುತ್ತಾರೆ ಎನ್ನುವ ಭಂಡತನ ಬಿಡಿ. ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ಬನ್ನಿ ಎಂದು ಒತ್ತಾಯಿಸಿದರು.
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಆದೇಶ ನೀಡಿರುವುದರಿಂದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಬ್ಲ್ಯಾಕ್‌ಮೇಲ್‌ಗೆ ನಾವು ಹೆದರುವುದಿಲ್ಲ. ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 3 ತಿಂಗಳಿನಿಂದ ನಮ್ಮ ಹೋರಾಟ ನಡೆಯುತ್ತಿದೆ. ಇದೀಗ ರಾಜ್ಯಪಾಲರಿಗೆ ಮನವರಿಕೆಯಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಆದರೂ, ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಈ ವಿಚಾರವನ್ನು ರಾಜಕೀಯ ವಿಷಯವನ್ನಾಗಿಸುತ್ತಿದ್ದಾರೆ. ಸಿದ್ದರಾಮಯ್ಯನವರ ರಾಜೀನಾಮೆಯ ಬೇಡಿಕೆಯನ್ನು ರಾಹುಲ್ ಗಾಂಧಿಯಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಲೂಟಿ ಮಾಡಿರುವ ಹಣ ಈಗಾಗಲೇ ಆ ಕುಟುಂಬಕ್ಕೆ ತಲುಪಿದೆ ಎಂದು ಹೇಳಿದ್ದಾರೆ.