ಕಲಬುರಗಿ: ಅತ್ಯಂತ ಹಿಂದುಳಿದ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 371(ಜೆ) ಜಾರಿಯಾಗಿ 10 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಭ್ರಮಾಚರಣೆಗೆ ಸಿದ್ಧವಾಗಿದೆ.
ಇಂದು ಕಲಬುರಗಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕಲ್ಯಾಣ ಕರ್ನಾಟಕ ಪ್ರದೇಶ ಎಂದೂ ಕರೆಯಲ್ಪಡುವ ರಾಜ್ಯದ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಶೈಕ್ಷಣಿಕ, ಉದ್ಯೋಗ ಮತ್ತು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದಿದೆ ಎಂದರು.
371(ಜೆ) ಜಾರಿಗೆ ಬಂದು 10 ವರ್ಷಗಳಾಗಿದ್ದು, ಈ ಮೈಲಿಗಲ್ಲು ಆಚರಿಸಲು ಕಾರ್ಯಕ್ರಮ ಯೋಜಿಸಲಾಗುತ್ತಿದೆ. ಈ ಸಂಭ್ರಮಾಚರಣೆ ನೆನಪಿಗಾಗಿ 371 ಹಾಸಿಗೆಗಳನ್ನು ಒಳಗೊಂಡಿರುವ ಜಯದೇವ ಆಸ್ಪತ್ರೆಯನ್ನು ಮುಂದಿನ ತಿಂಗಳು ಉದ್ಘಾಟಿಸಲಾಗುವುದು ಎಂದು ಡಿ ಕೆ ಶಿವಕುಮಾರ್ ಹೇಳಿದರು.
'ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಇಎಸ್‌ಐ ಆಸ್ಪತ್ರೆ ತಂದಿದ್ದು, ಇದೀಗ ಕಲಬುರಗಿ ರಾಜ್ಯದಲ್ಲಿ ಮೂರನೇ ಆರೋಗ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಇಂದಿರಾಗಾಂಧಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕಿದ್ವಾಯಿ, ಜಯದೇವ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ. ಇದರ ಪರಿಣಾಮವಾಗಿ, ಈ ಭಾಗದ ಜನರು ಇನ್ನು ಮುಂದೆ ವೈದ್ಯಕೀಯ ಚಿಕಿತ್ಸೆಗಾಗಿ ಬೆಂಗಳೂರು ಅಥವಾ ಹೈದರಾಬಾದ್‌ಗೆ ತೆರಳುವ ಅಗತ್ಯವಿಲ್ಲ ಎಂದರು.
371 ಜೆ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಇಬ್ಬರು ನಾಯಕರೊಂದಿಗೆ ಚರ್ಚಿಸಿದ ನಂತರ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ. "ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಮುಂದಾಳತ್ವ ವಹಿಸಿ 371 (ಜೆ) ಜಾರಿಗೊಳಿಸಿದರು. ಇದು ಈ ಪ್ರದೇಶದಲ್ಲಿ ಶೈಕ್ಷಣಿಕ, ಕೈಗಾರಿಕಾ ಮತ್ತು ಸಾಮಾಜಿಕ ಕ್ರಾಂತಿಗಳಿಗೆ ಕಾರಣವಾಗಿದೆ ಎಂದರು.
ತುಂಗಭದ್ರಾ ಅಣೆಕಟ್ಟಿನ ಗೇಟ್ ದುರಸ್ತಿ ಮಾಡಿದ ಕಾರ್ಮಿಕರಿಗೂ ಗೌರವ ಸಲ್ಲಿಕೆ
70 ವರ್ಷಗಳಷ್ಟು ಹಳೆಯದಾದ ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್‌ನ ಸರಪಳಿ ಲಿಂಕ್ ಆಕಸ್ಮಿಕವಾಗಿ ಕಟ್ ಆಗಿದೆ. ಈ ಸಂಬಂಧ ಬಿಜೆಪಿ ಮತ್ತು ಇತರರು ನಮ್ಮನ್ನು ಕಟುವಾಗಿ ಟೀಕಿಸಿದರು. ನಾವು ಹಗಲು, ರಾತ್ರಿ ನಿದ್ದೆ ಮಾಡದೆ ಕಾರ್ಯಪ್ರವೃತ್ತರಾದೆವು. ಕೂಡಲೇ ಎಂಜಿನಿಯರ್‌ಗಳು, ತಂತ್ರಜ್ಞರನ್ನು ಕರೆಸಿ ಗೇಟನ್ನು ಮತ್ತೆ ಅಳವಡಿಸಲಾಯಿತು. ಪ್ರತಿಯೊಬ್ಬ ಕೆಲಸಗಾರನೂ ಪಣತೊಟ್ಟು ಕೆಲಸ ಮಾಡಿದ್ದಾರೆ. ಈ ಕೆಲಸಕ್ಕೆ ಶ್ರಮಿಸಿದ ಚಿಕ್ಕ ಕಾರ್ಮಿಕರು, ಎಂಜಿನಿಯರ್‌ಗಳು, ತಂತ್ರಜ್ಞರು, ಅಧಿಕಾರಿಗಳನ್ನು ಸನ್ಮಾನ ಮಾಡುವ ಕೆಲಸವನ್ನು ಸರ್ಕಾರ ಮುಂದಿನ ದಿನಗಳಲ್ಲಿ ಮಾಡುತ್ತದೆ ಎಂದು ತಿಳಿಸಿದರು.