ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಭೂ ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಿದ್ದು, ಜಿಲ್ಲಾ ಮತ್ತು ತಾಲೂಕು ಪಂಚಾಯತ್ನಲ್ಲಿ ಬಾಕಿ ಉಳಿದಿರುವ 1,494 ಕೋಟಿ ರೂ. ಹಣ ದುರುಪಯೋಗದ ಬಗ್ಗೆ ವಿಧಾನಪರಿಷತ್ ಬಿಜೆಪಿ ಸದಸ್ಯ ಅರುಣ್ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಲಾಗಿದೆ.
ಹಣಕಾಸು ಅವ್ಯವಹಾರ, ರಾಜ್ಯದ ಕ್ರೋಢೀಕೃತ ನಿಧಿ ದುರ್ಬಳಕೆ ಹಾಗೂ ಸಾಂವಿಧಾನಿಕ ಬಾಧ್ಯತೆಯ ಉಲ್ಲಂಘನೆ ಕುರಿತು ತನಿಖೆ ನಡೆಸುವಂತೆ ಕೋರಿದ್ದಾರೆ. ಅಲ್ಲದೆ ಅಸಂವಿಧಾನಿಕ ಹಣಕಾಸು ವ್ಯವಹಾರ ನಡೆಸಿರುವ ಸಿಎಂ ಸಿದ್ದರಾಮಯ್ಯ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
2023ರ ಬೆಳಗಾವಿ ಅಧಿವೇಶನದಲ್ಲಿ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳ ನಿಧಿ-IIರಲ್ಲಿ ವ್ಯಯವಾಗದೆ ಬಾಕಿ ಉಳಿದ ಹಣಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು, ಬಳಕೆಯಾಗದ ಜಿಲ್ಲಾ ಪಂಚಾಯಿತಿಗಳ 459 ಕೋಟಿ ಹಾಗೂ ತಾಲೂಕು ಪಂಚಾಯಿತಿಗಳ 1,494 ಕೋಟಿ ರೂ.ಗಳನ್ನು ಸಂಚಿತ ನಿಧಿಗೆ ಜಮಾ ಮಾಡಲಾಗಿದೆ ಎಂದು ಲಿಖಿತ ಉತ್ತರ ನೀಡಿದ್ದರು. ಆದರೆ, ಇದನ್ನು ಪರಿಶೀಲಿಸಿದ ಬಳಿಕ ಮುಖ್ಯಮಂತ್ರಿಯವರು ನೀಡಿದ ಉತ್ತರ ಸುಳ್ಳು ಎಂದು ಸಾಬೀತಾಗಿದೆ ಎಂದು ಅರುಣ್ ಹೇಳಿದ್ದಾರೆ.
ರಾಜ್ಯ ಸರ್ಕಾರವು ಸಂವಿಧಾನದ 202, 205 ಮತ್ತು 206ನೇ ವಿಧಿಗಳ ಅಡಿಯ ನಿಬಂಧನೆಗಳನ್ನು ಉಲ್ಲಂಘಿಸಿದೆ. ಸಿಎಂ ಸಿದ್ದರಾಮಯ್ಯ ಅವರು 164ನೇ ವಿಧಿ ಅದರಲ್ಲೂ ವಿಶೇಷವಾಗಿ 163(3)ರ ಅಡಿಯಲ್ಲಿರುವ ನಿಬಂಧನೆಗಳನ್ನು ಉಲ್ಲಂಘಿಸಿ ರಾಜ್ಯದ ಸಂಚಿತ ನಿಧಿಯನ್ನು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ಸಿಎಂ ನೀಡಿದ್ದ ಲಿಖಿತ ಉತ್ತರವನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ ಅದು ಸಂಪೂರ್ಣವಾಗಿ ಸುಳ್ಳು ಎಂದು ಸಾಬೀತಾಯಿತು. ನಂತರ ಪರಿಷತ್ತಿನ ಮುಂದೆಯೂ ಅದನ್ನೇ ನಿರೂಪಿಸಲಾಯಿತು. ಆದರೆ, ಹಣಕಾಸು ಸಚಿವರು (ಸಿಎಂ) ಅವರ ಕಾನೂನುಬಾಹಿರ ಲಿಖಿತ ಉತ್ತರದ ಬಗ್ಗೆ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ ಎಂದು ಅರುಣ್ ಹೇಳಿದ್ದಾರೆ.
ಇದಾದ ಬಳಿಕ 2024ರ ಜ.23ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಭಟನಾ ಪತ್ರ ಸಲ್ಲಿಸಲಾಗಿದ್ದು, 1,494 ಕೋಟಿ ರೂ. ಖರ್ಚು ಮಾಡದ ಬಾಕಿ ಹಣವನ್ನು ಖಜಾನೆಗೆ ಜಮಾ ಮಾಡಿಲ್ಲ ಎಂದು ಖಜಾನೆ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ಸಿಎಂ ಮತ್ತು ಹಣಕಾಸು ಸಚಿವರಾದ ಸಿದ್ದರಾಮಯ್ಯ ಅವರು ಉದ್ದೇಶಪೂರ್ವಕವಾಗಿ ವಿಧಾನ ಪರಿಷತ್ತಿನ ಮುಂದೆ ವಸ್ತುನಿಷ್ಠವಾಗಿ ಸುಳ್ಳು ಅಥವಾ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿ ಸತ್ಯವನ್ನು ಮರೆಮಾಚಿದ್ದಾರೆ ಎಂದು ಅರುಣ್ ಆರೋಪಿಸಿದ್ದಾರೆ.