ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ ಹಾಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೌಡಿಗಳನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸುವಂತೆ ಬೆಂಗಳೂರು ಪೊಲೀಸರು ಕೇಳಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಮಂಗಳವಾರ ತಿಳಿಸಿದ್ದಾರೆ.
ಭಾನುವಾರ ಜೈಲಿನ ಹುಲ್ಲುಹಾಸಿನ ಮೇಲೆ ರೌಡಿಶೀಟರ್ ಸೇರಿದಂತೆ ಇತರ ಮೂವರ ಜೊತೆ ದರ್ಶನ್ ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ನಗರ ಪೊಲೀಸರಿಂದ ಈ ಪ್ರಸ್ತಾವನೆ ಬಂದಿದೆ.
ಅಲ್ಲದೆ, ದರ್ಶನ್ ಜೈಲಿನಿಂದ ವಿಡಿಯೋ ಕಾಲ್ ಮೂಲಕ ವ್ಯಕ್ತಿಯೊಬ್ಬನೊಂದಿಗೆ ಮಾತನಾಡಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ಗೆ ರಾಜಾತಿಥ್ಯ ನೀಡಿದ ಆರೋಪದ ಮೇಲೆ ಕಾರಾಗೃಹದ ಮುಖ್ಯ ಅಧೀಕ್ಷಕ ಸೇರಿದಂತೆ ಒಂಬತ್ತು ಕಾರಾಗೃಹ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದಯಾನಂದ, ಕಾರಾಗೃಹದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣವನ್ನು ಸಹಾಯಕ ಪೊಲೀಸ್ ಆಯುಕ್ತರು ತನಿಖೆ ನಡೆಸುತ್ತಾರೆ ಮತ್ತು ಇನ್ನೆರಡು ಪ್ರಕರಣಗಳನ್ನು ಇನ್ಸ್‌ಪೆಕ್ಟರ್‌ಗಳು ತನಿಖೆ ಮಾಡುತ್ತಾರೆ ಎಂದರು.
''ಕೆಲವು ರೌಡಿಗಳು ಅಕ್ರಮದಲ್ಲಿ ತೊಡಗಿದ್ದಾರೆಂಬ ಮಾಹಿತಿಯ ಮೇರೆಗೆ ಶನಿವಾರ ಸಿಸಿಬಿ ಪೊಲೀಸರ ತಂಡ ಕಾರಾಗೃಹದ ಎಲ್ಲಾ ಬ್ಯಾರಕ್‌ಗಳನ್ನು ಪರಿಶೀಲಿಸಲು ಹೋದಾಗ, ಯಾವುದೇ ನಿರ್ಬಂಧಿತ ವಸ್ತುಗಳು ಅಥವಾ ಸಾಕ್ಷ್ಯಗಳು ಸಿಕ್ಕಿಲ್ಲ. ನಾವು ಅಲ್ಲಿಗೆ ತಲುಪುವ ಮೊದಲು ಕೆಲವು ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರಿಸಬಹುದೆಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾಕಷ್ಟು ರೌಡಿಗಳು ಇದ್ದಾರೆ. ರೌಡಿಗಳು ಅಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆಗಳಿರುವುದರಿಂದ ಅವರನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದೇವೆ. ರೌಡಿಗಳ ಜತೆಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಭಾಗಿಯಾದವರನ್ನೂ ಬೇರೆಡೆಗೆ ಸ್ಥಳಾಂತರಿಸುವಂತೆ ಕೇಳಿದ್ದೇವೆ’’ ಎಂದರು.