ವಿಲ್ಸನ್ ಗಾರ್ಡನ್ ನಾಗ ಜೊತೆ ನಟ ದರ್ಶನ್ 
ರಾಜ್ಯ

ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ: ತನಿಖೆಗೆ 5 ವಿಶೇಷ ತಂಡಗಳ ರಚನೆ

ಐದು ತಂಡಗಳು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಅವರ ನೇತೃತ್ವದಲ್ಲಿ ಈಗಾಗಲೇ ತನಿಖೆ ಆರಂಭಿಸಿದ್ದು, ಮಂಗಳವಾರ ಮಧ್ಯಾಹ್ನ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಟ ದರ್ಶನ್‌ ಹಾಗೂ ಕುಖ್ಯಾತ ರೌಡಿ ವಿಲ್ಸನ್‌ಗಾರ್ಡನ್‌ ನಾಗ ಮತ್ತು ಇತರರಿಗೆ ರಾಜಾತಿಥ್ಯ ನೀಡಿರುವ ವಿಚಾರವಾಗಿ ಪರಪ್ಪನ ಅಗ್ರಹಾರ ಪೊಲೀಸ್‌‍ ಠಾಣೆಯಲ್ಲಿ ದಾಖಲಾಗಿರುವ ಮೂರು ಪ್ರಕರಣಗಳ ತನಿಖೆಗಾಗಿ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಈ ಐದು ತಂಡಗಳು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಅವರ ನೇತೃತ್ವದಲ್ಲಿ ಈಗಾಗಲೇ ತನಿಖೆ ಆರಂಭಿಸಿವೆ. 5 ತಂಡಗಳ ಅಧಿಕಾರಿಗಳು ಮಂಗಳವಾರ ಮಧ್ಯಾಹ್ನ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದೆ.

ಜೈಲುಗಳ ಆವರಣದಲ್ಲಿ ಕೈದಿಗಳ ವಿಚಾರಣೆ ಕಡ್ಡಾಯವಾಗಿರುವುದರಿಂದ ತಂಡಗಳ ಉಸ್ತುವಾರಿ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಕೋರಿದ್ದರು. ಸೋಮವಾರ ನ್ಯಾಯಾಲಯ ಅನುಮತಿ ನೀಡಿತ್ತು.

ಇದರ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತ ಬಿ ದಯಾನಂದ, ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಚಂದ್ರಗುಪ್ತ ಮತ್ತು ಇತರ ಅಧಿಕಾರಿಗಳು ಮಂಗಳವಾರ ಸಂಜೆ ಕಾರಾಗೃಹಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಏತನ್ಮಧ್ಯೆ ನಟ ದರ್ಶನ್ ಜೈಲು ಫೋಟೋ ವೈರಲ್ ಬೆನ್ನಲ್ಲೇ ಡ್ಯಾಮೇಜ್ ಕಂಟ್ರೋಲ್​ಗೆ ಮುಂಜಾಗಿರುವ ರಾಜ್ಯ ಸರ್ಕಾರ ಕಾರಾಗೃಹ ಡಿಐಜಿ ಸೋಮಶೇಖರ್ ಜಾಗಕ್ಕೆ ನೂತನ ಕಾರಾಗೃಹ ಡಿಐಜಿಪಿಯಾಗಿ ಮೈಸೂರು ಕಾರಗೃಹ ಅಕಾಡೆಮಿ ಡಿಐಜಿಯಾಗಿದ್ದ ದಿವ್ಯಶ್ರೀ ಅವರನ್ನು ಹಾಗೂ ಕೇಂದ್ರ ಕಾರಗೃಹ ಮುಖ್ಯ ಅಧೀಕ್ಷಕ ವಿ. ಶೇಷಮೂರ್ತಿ ಅಮಾನತು ಬೆನ್ನಲ್ಲೇ ಜೈಲಿನ ಮುಖ್ಯ ಅಧೀಕ್ಷಕರಾಗಿ ಕೆ.ಸುರೇಶ್ ಎಂಬುವವರನ್ನು ಸರ್ಕಾರ ನೇಮಕ ಮಾಡಿದೆ. ಅಷ್ಟೇ ಅಲ್ಲ, ಪರಪ್ಪನ ಅಗ್ರಹಾರಕ್ಕೆ KISF (ಕರ್ನಾಟಕ ಕೈಗಾರಿಕ ಭದ್ರತಾ ದಳ ಇಲಾಖೆ ಸಿಬ್ಬಂದಿ & ಅಧಿಕಾರಿಗಳು) ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಅವರ ಅನುಮತಿ ಪಡೆದು ಜೈಲಿನ ಆವರಣಕ್ಕೆ ಪ್ರವೇಶಿಸಬೇಕಾಗಿದೆ. ಇನ್ನು ಕೇಂದ್ರ ಕಾರಗೃಹ ಭದ್ರತೆಗಾಗಿ ಓರ್ವ ಅಸಿಸ್ಟೆಂಟ್ ಕಮಾಂಡೆಂಟ್, ಇಬ್ಬರು ಇನ್ಸ್ಪೆಕ್ಟರ್​ಗಳು ಸೇರಿದಂತೆ ನೂರಕ್ಕೂ ಹೆಚ್ಚು ಸಿಬ್ಬಂದಿ ನೇಮಕ ಮಾಡಲಾಗಿದೆ.

ಈ ನಡುವೆ ಸರ್ಕಾರ ರಚಿಸಿರುವ ಐದು ತಂಡಗಳ ಪೈಕಿ ಮೂರು ತಂಡಗಳು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೂರು ಎಫ್‌ಐಆರ್‌ಗಳ ವಿಚಾರಣೆ ನಡೆಸಲಿವೆ.

ಒಂದನೇ ಪ್ರಕರಣದಲ್ಲಿ ದರ್ಶನ್‌, ನಾಗರಾಜ ಹಾಗೂ ವಿಲ್ಸನ್‌ ಗಾರ್ಡನ್‌ ನಾಗ ಮತ್ತು ಕುಳ್ಳ ಸೀನನ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಈ ಪ್ರಕರಣದ ತನಿಖೆಯನ್ನು ಬೇಗೂರು ಠಾಣೆ ಇನ್ಸ್ ಪೆಕ್ಟರ್‌ ನೇತೃತ್ವದಲ್ಲಿ ನಡೆಸುತ್ತಿದ್ದು, ಜೈಲಿನ ಲಾನ್‌ನಲ್ಲಿ ಕುಳಿತು ಸಿಗರೇಟ್‌ ಸೇವನೆ, ನಟ ದರ್ಶನ್‌ಗೆ ರೌಡಿಗಳ ಜೊತೆ ಸಂಪರ್ಕ ಹೇಗೆ ಆಯ್ತು, ಲಾನ್‌ನಲ್ಲಿ ಒಟ್ಟಿಗೆ ಕುಳಿತುಕೊಳ್ಳಲು ಇವರಿಗೆ ಚೇರ್‌, ಟೀಪಾಯಿ ವ್ಯವಸ್ಥೆ ಮಾಡಿದವರ್ಯಾರು, ಕಾಫಿ ತಂದು ಕೊಟ್ಟವರ್ಯಾರು, ಜೈಲಿನಲ್ಲಿ ಸಿಗರೇಟ್‌ ನಿಷೇಧವಿದ್ದರೂ ಒಳಗೆ ಹೇಗೆ ಬಂತು? ಎಂಬಿತ್ಯಾದಿ ಬಗ್ಗೆ ಮಾಹಿತಿಗಳನ್ನು ತನಿಖಾ ತಂಡ ಕಲೆಹಾಕುತ್ತಿದೆ.

ಎರಡನೇ ಪ್ರಕರಣದಲ್ಲಿ ದರ್ಶನ್‌, ಧರ್ಮ ಮತ್ತು ಸತ್ಯನ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ಹುಳಿಮಾವು ಠಾಣೆ ಇನ್ಸ್ ಪೆಕ್ಟರ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಮೊಬೈಲ್‌ ಫೋನ್‌ನಲ್ಲಿ ದರ್ಶನ್‌ ರೌಡಿಯ ಮಗನಿಗೆ ವಿಡಿಯೋ ಕಾಲ್‌ ಮಾಡಿರುವ ಬಗ್ಗೆ, ಅದು ವೈರಲ್‌ ಆಗಿರುವ ಫೋಟೋ ತೆಗೆದವರ್ಯಾರು, ಜೈಲಿನಲ್ಲಿ ಮೊಬೈಲ್‌ ನಿಷೇಧವಿದ್ದರೂ ಆರೋಪಿಗಳ ಕೈಗೆ ಮೊಬೈಲ್‌ ಸಿಕ್ಕಿದ್ದಾದರೂ ಹೇಗೆ, ಅದನ್ನು ಒದಗಿಸಿದವರ್ಯಾರು, ಜೈಲಿನ ಸುತ್ತ ಜಾಮರ್‌ ಅಳವಡಿಸಿದ್ದರೂ ಇಂಟರ್‌ನೆಟ್‌ ಕನೆಕ್ಷನ್‌ ಸಿಕ್ಕಿದ್ದಾದರೂ ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

3ನೇ ಪ್ರಕರಣದಲ್ಲಿ ಜೈಲಿನ ನಾಲ್ಕು ಮಂದಿ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯ ಲೋಪದ ವಿರುದ್ಧ ಎಲೆಕ್ಟ್ರಾನಿಕ್‌ ಸಿಟಿ ಉಪವಿಭಾಗದ ಎಸಿಪಿ ಅವರು ತನಿಖೆ ನಡೆಸುತ್ತಿದ್ದಾರೆ.

ಉಳಿದ ಎರಡು ತಂಡಗಳಲ್ಲಿ ಒಂದು ತಂಡ ನಟ ದರ್ಶನ್‌ ಪರಪ್ಪನ ಅಗ್ರಹಾರ ಜೈಲು ಸೇರಿದ ನಂತರ ಅವರನ್ನು ಯಾರ್ಯಾರು ಇದುವರೆಗೂ ಭೇಟಿ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಉಳಿದ ಆರೋಪಿಗಳನ್ನು ಯಾರು ಭೇಟಿ ಮಾಡಿದ್ದಾರೆಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ.

ಐದನೇ ತಂಡ ಜೈಲಿನ ಒಳಗಡೆ ಹಾಗೂ ಹೊರಗಡೆ ಅಳವಡಿಸಿರುವ ಎಲ್ಲಾ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡುತ್ತಿದೆ. ಒಟ್ಟಾರೆ ಈ ಪ್ರಕರಣದಲ್ಲಿ ದಾಖಲಾಗಿರುವ ಮೂರು ಎಫ್‌ಐಆರ್‌ಗಳ ತನಿಖೆಗಾಗಿ ಐದು ತಂಡಗಳು ಕಾರ್ಯಾಚರಣೆಗಿಳಿದಿದ್ದು, ಮತ್ತಷ್ಟು ಮಾಹಿತಿಗಳನ್ನು ಕಲೆಹಾಕಿ ವರದಿ ನೀಡಲಿವೆ.

ನಟ ದರ್ಶನ್‌ ಜೈಲಿನೊಳಗೆ ಇನ್ನಿತರರೊಂದಿಗೆ ಒಟ್ಟಿಗೆ ಕುಳಿತು ಕಾಫಿ ಹಾಗೂ ಸಿಗರೇಟ್‌ ಹಿಡಿದುಕೊಂಡಿರುವ ಫೋಟೋ ವೈರಲ್‌ ಆಗುತ್ತಿದ್ದಂತೆ ಜೈಲಿನ ಒಂಭತ್ತು ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಗಳ ತಲೆದಂಡವಾಗಿದ್ದು, ಉಳಿದ ಜೈಲಿನ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಭಯ ಶುರುವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT