ಬೆಳಗಾವಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಶರಣ್ ಪ್ರಕಾಶ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಸಚಿವ ಶರಣ್ ಪ್ರಕಾಶ್ ಪಾಟೀಲ್, 'ಯುವನಿಧಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 1.45 ಲಕ್ಷ ಮಂದಿಗೆ ಹಣ ವರ್ಗಾಯಿಸಲಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ನವೀನ್ ಅವರು 'ರಾಜ್ಯದಲ್ಲಿ ಕಳೆದ 2 ವರ್ಷಗಳಲ್ಲಿ 8 ಲಕ್ಷ ವಿದ್ಯಾರ್ಥಿಗಳು ಪದವಿ ಮುಗಿಸಿದ್ದಾರೆ. ಆದರೆ ಯುವನಿಧಿಗೆ ನೋಂದಣಿ ಆಗಿರೋದು ಕಡಿಮೆ ಆಗಿದೆ ಯಾಕೆ? ಯುವನಿಧಿಗೆ ಪ್ರತಿ ತಿಂಗಳು ಹಣ ಕೊಡ್ತಿದ್ದೀರಾ? ಎಷ್ಟು ಹಣ ಕೊಡ್ತಿದ್ದೀರಾ?' ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, 'ಯುವನಿಧಿ ಯೋಜನೆಯಡಿ ಪ್ರಸ್ತಕ ಸಾಲಿನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿ ಆರು ತಿಂಗಳೊಳಗೆ ಉನ್ನತ ಶಿಕ್ಷಣ ಸೇರದಿದ್ದರೆ ಹಾಗೂ ನೌಕರಿ ಸಿಗದಿದ್ದರೆ ಅಂತಹ ಅಭ್ಯರ್ಥಿಗಳಿಗೆ 3 ಸಾವಿರ ರೂ ನೀಡಲಾಗುತ್ತಿದೆ. 2023-24ನೇ ಶೈಕ್ಷಣಿಕ ಸಾಲಿನಲ್ಲಿ 5.26 ಲಕ್ಷ ಅಭ್ಯರ್ಥಿಗಳು ಯೋಜನೆಗೆ ಅರ್ಹರಾಗಿದ್ದರೂ ಅರ್ಜಿ ಸಲ್ಲಿಸಿರುವವರು ಮಾತ್ರ 1.81 ಲಕ್ಷ ಮಂದಿ.
ಈ ಪೈಕಿ 1.45 ಲಕ್ಷ ಅಭ್ಯರ್ಥಿಗಳ ಅರ್ಜಿ ಪರಿಶೀಲಿಸಿ ಹಣ ಮಂಜೂರು ಮಾಡಲಾಗಿದೆ. ಉನ್ನತ ಶಿಕ್ಷಣ ಸೇರಿರುವುದು, ಆದಾಯ ತೆರಿಗೆ ಹಾಗೂ ಜಿಎಸ್ಟಿ ವ್ಯಾಪ್ತಿಯಲ್ಲಿ ಬಂದಿರುವುದೂ ಸೇರಿದಂತೆ ವಿವಿಧ ಕಾರಣಗಳಿಗಾಗಿ ಯೋಜನೆಗೆ ಅನರ್ಹರಾಗಿದ್ದಾರೆ. ಇದು ನಿರಂತರ ಪ್ರಕ್ರಿಯೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಸಮಗ್ರವಾಗಿ ಪರಿಶೀಲಿಸಿ ಯೋಜನೆಯ ಫಲಾನುಭವಿಗಳಾಗಬಹುದು ಎಂದು ಸಚಿವ ಪಾಟೀಲ್ ಸದನಕ್ಕೆ ತಿಳಿಸಿದರು.
ಅಂತೆಯೇ ಈ ಅವಧಿಯಲ್ಲಿ ಅವರು ಕೆಲಸವನ್ನು ಪಡೆದ ನಂತರ, ಯೋಜನೆಯ ಪ್ರಯೋಜನವು ಸ್ವಯಂಚಾಲಿತವಾಗಿ ಸ್ಥಗಿತವಾಗುತ್ತದೆ ಎಂದೂ ಹೇಳಿದರು.