ತುಳಸಿಗೌಡ 
ರಾಜ್ಯ

ಉತ್ತರ ಕನ್ನಡ: ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ನಿಧನ

ತುಳಸಿಗೌಡ ಅವರು ವರ್ಷಕ್ಕೆ 30 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರ ಪ್ರೇಮಿ ಎಂದು ಹೆಸರಾಗಿದ್ದರು. ಕಳೆದ 14 ವರ್ಷಕ್ಕೂ ಹೆಚ್ಚು ಕಾಲ ಗಿಡ ನೆಟ್ಟು ಬೆಳೆಸುವ ಕಾಯಕದಲ್ಲಿ ತೊಡಗಿದ್ದರು.

ಅಂಕೋಲಾ: ಪರಿಸರ ಪ್ರೇಮಿ,ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ತುಳಸಿಗೌಡ ಅವರು ವರ್ಷಕ್ಕೆ 30 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರ ಪ್ರೇಮಿ ಎಂದು ಹೆಸರಾಗಿದ್ದರು. ಕಳೆದ 14 ವರ್ಷಕ್ಕೂ ಹೆಚ್ಚು ಕಾಲ ಗಿಡ ನೆಟ್ಟು ಬೆಳೆಸುವ ಕಾಯಕದಲ್ಲಿ ತೊಡಗಿದ್ದರು.

ಅರಣ್ಯ ಇಲಾಖೆಯ ಸಸ್ಯ ನರ್ಸರಿಯಲ್ಲಿ ಚಿಕ್ಕ ವಯಸ್ಸಿನಲ್ಲೇ ಕೆಲಸ ಮಾಡಲು ಪ್ರಾರಂಭಿಸಿದ್ದ ತುಳಸಿಗೌಡ, ಬಾಲ್ಯದಲ್ಲಿಯೇ ಆಗಾಗ್ಗೆ ನರ್ಸರಿಗಳಿಗೆ ಭೇಟಿ ನೀಡಿ, ಸಸಿಗಳ ಬೆಳವಣಿಗೆ ಕುರಿತು ಆಳವಾದ ಜ್ಞಾನ ಬೆಳೆಸಿಕೊಂಡಿದ್ದರು. ಅಂಕೋಲಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಮರಗಳನ್ನು ನೆಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಅವುಗಳಲ್ಲಿ ಬಹುತೇಕ ಸಸಿಗಳು ಕೆಲವೇ ವರ್ಷಗಳಲ್ಲಿ ಎತ್ತರಕ್ಕೆ ಬೆಳೆದಿದ್ದವು. ಅವರು ಪದ್ಮಶ್ರೀ ಮತ್ತು ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಸಸ್ಯಗಳ ವಿಶ್ವಕೋಶ ಎಂದೇ ಕರೆಯಲಾಗುತ್ತಿದ್ದ ತುಳಸಿ ಗೌಡ, ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಸಮುದಾಯಕ್ಕೆ ಸೇರಿದವರು. ಅವರು ತಮ್ಮ ಮೂವರು ಮಕ್ಕಳು ಮತ್ತು ಹಲವಾರು ಹಿತೈಷಿಗಳನ್ನು ಅಗಲಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆಯು ಸಸಿಗಳನ್ನು ಪೋಷಿಸುವಲ್ಲಿ ಅವರ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ, ಸಿಬ್ಬಂದಿಯಾಗಿ ವಿಶೇಷ ಸ್ಥಾನಮಾನ ನೀಡಿತ್ತು. ನಿವೃತ್ತಿಯ ನಂತರವೂ ಅವರು ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿತು.

ತುಳಸಿಗೌಡ ಅವರ ಮನೆಯಲ್ಲಿ ತೀರಾ ಬಡತನವಿದ್ದರೂ ಹಸಿರು ಕ್ರಾಂತಿ ಮಾಡಿ ಇಡೀ ದೇಶದ ಗಮನ ಸೆಳೆದಿದ್ದರು. ತುಳಸಿಗೌಡ ಅವರ ಪರಿಸರ ಪ್ರೇಮವನ್ನ ಮೆಚ್ಚಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ .2020ರಲ್ಲಿ ಅಂದಿನ ರಾಷ್ಟ್ರಪತಿ ರಮಾನಾಥ ಕೋವಿಂದ ಅವರಿಂದ ತುಳಸಿಗೌಡ ಅವರು ಪದ್ಮಶ್ರೀ ಪ್ರಶಸ್ತಿ ಸ್ವಿಕರಿಸಿದ್ದರು.

ತುಳಸಿಗೌಡ ಅವರನ್ನು ಕನ್ನಡ ನಾಡು ಮಾತ್ರವಲ್ಲದೇ ದೇಶ, ಗುರುತಿಸುವಂತೆ ಮಾಡಿದ್ದ ಮಾಜಿ ಅರಣ್ಯಧಿಕಾರಿ ಅ.ನ. ಯಲ್ಲಪ್ಪ ರೆಡ್ಡಿ ತೀವ್ರ ಸಂತಾಪ ಸೂಚಿಸಿದ್ದಾರೆ. ತುಳಸಿಗೌಡ ಅವರ ನಿಧನ ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ. ನರ್ಸರಿಯಲ್ಲಿ ಕೆಲಸಗಾರರಾಗಿದ್ದ ಅವರು ಸಸಿಗಳನ್ನು ಬೆಳೆಸುವ ವಿಶಿಷ್ಟ ಪ್ರತಿಭೆಯನ್ನು ಹೊಂದಿದ್ದರು. ಮರಗಳನ್ನು ಬೆಳೆಸುವ ವಿಷಯದಲ್ಲಿ ಆಕೆಯ ಕೈಯಲ್ಲಿ ಮಾಂತ್ರಿಕತೆ ಇತ್ತು. ಪ್ರತಿ ಬೀಜವನ್ನು ಎಷ್ಟು ಆಳವಾಗಿ ನೆಡಬೇಕು ಮತ್ತು ಮಣ್ಣು, ಮರಳು ಮತ್ತು ರಸಗೊಬ್ಬರಗಳ ಸರಿಯಾದ ಮಿಶ್ರಣವನ್ನು ನಿಖರವಾಗಿ ತಿಳಿದಿದ್ದರು. ತುಳಸಿ ಗೌಡ ಅವರು ಪೋಷಿಸಿದ ಸಸಿಗಳು ಇತರ ನರ್ಸರಿಗಳ ಸಸಿಗಳಿಗೆ ಹೋಲಿಸಿದರೆ ಗಣನೀಯವಾಗಿ ಉತ್ತಮ ಬೆಳವಣಿಗೆ ಕಂಡಿವೆ ಎಂದು ಅವರು ನೆನಪಿಸಿಕೊಂಡಿದ್ದಾರೆ.

ಹಾಲಕ್ಕಿ ಸಮುದಾಯ ಮತ್ತು ತುಳಸಿ ಗೌಡ ಅವರೊಂದಿಗೆ ದೀರ್ಘಕಾಲ ಒಡನಾಟ ಹೊಂದಿದ್ದ ಮಂಗಳೂರಿನ ಸಹ್ಯಾದ್ರಿ ಸಂಚಯ ಸಂಸ್ಥೆಯ ಖ್ಯಾತ ಪರಿಸರವಾದಿ ದಿನೇಶ್ ಹೊಳ್ಳ, ಸಸ್ಯ ಮತ್ತು ಅರಣ್ಯಗಳ ಬಗ್ಗೆ ತುಳಸಿಗೌಡ ಅವರ ಅಪ್ರತಿಮ ಜ್ಞಾನವನ್ನು ಶ್ಲಾಘಿಸಿದ್ದಾರೆ. "ಅವರಿಗೆ ಸಸ್ಯಗಳು ಮತ್ತು ಕಾಡಿನ ಬಗ್ಗೆ ಅಪಾರ ಜ್ಞಾನವಿತ್ತು. ನೆಡುವುದಕ್ಕಿಂತ ಹೆಚ್ಚಾಗಿ, ಸಸಿಗಳನ್ನು ಪೋಷಿಸಲು ಮತ್ತು ಅವು ಬೆಳೆದಂತೆ ಸಸ್ಯಗಳನ್ನು ನೋಡಿಕೊಳ್ಳುವುದರಲ್ಲಿ ಹೆಸರುವಾಸಿಯಾಗಿದ್ದರು. ಎಷ್ಟು ಸಸಿಗಳನ್ನು ನೆಟ್ಟಿದ್ದೀರಾ ಎಂಬುದು ಪ್ರಮುಖವಲ್ಲಾ, ಯಾವ ರೀತಿಯಲ್ಲಿ ಸಸಿಗಳನ್ನು ಪೋಷಿಸುತ್ತೀರಾ ಎಂಬುದು ಮುಖ್ಯ ಎಂಬ ತುಳಸಿಗೌಡ ಅವರು ಆಗಾಗ್ಗೆ ಹೇಳುತ್ತಿದ್ದರು ಎಂದು ಸ್ಮರಿಸಿದ್ದಾರೆ.

ತುಳಸಿಗೌಡ ಅವರ ನಿಧನಕ್ಕೆ ಮಾಜಿ ಸಂಸದ ಡಿಕೆ ಸುರೇಶ್ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಂತಾಪ ಸೂಚಿಸಿದ್ದಾರೆ.

ತುಳಸಿಗೌಡ ಕಳೆದ ಕೆಲವು ತಿಂಗಳಿಂದ ಅಸ್ವಸ್ಥರಾಗಿದ್ದರು. ಪಾರ್ಶ್ವವಾಯುವಿಗೆ ಒಳಗಾದ ನಂತರ ಹಾಸಿಗೆ ಹಿಡಿದಿದ್ದರು. ಅವರ ಅಂತ್ಯಕ್ರಿಯೆ ಮಂಗಳವಾರ ಅಂಕೋಲಾದ ಅವರ ಸ್ವಗ್ರಾಮದಲ್ಲಿ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT