ಬೆಳಗಾವಿ: ಬಳ್ಳಾರಿ ಜಿಲ್ಲೆಯಲ್ಲಿ ಇತ್ತೀಚಿಗೆ ಸಂಭವಿಸಿದ ಬಾಣಂತಿಯರ ಸಾವಿನ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ಬಳಿಕ ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳವಾರ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಇಲಾಖೆಯ ಅಭಿವೃದ್ಧಿ ಆಯುಕ್ತರ ನೇತೃತ್ವದ ತಜ್ಞರ ಸಮಿತಿಯಿಂದ ತನಿಖೆ ನಡೆಸಲಾಗುತ್ತಿದ್ದು, ಸಮಿತಿ ವರದಿ ಪರಿಶೀಲನೆ ಬಳಿಕ ಸರ್ಕಾರ ಮುಂದಿನ ಕ್ರಮ ಕುರಿತು ನಿರ್ಧರಿಸಲಿದೆ. ಬಾಣಂತಿಯರ ಸಾವಿಗೆ ಕಾರಣ ಏನು ಹಾಗೂ ಯಾರಿಂದ ಆಗಿದೆ ಎಂಬುದರ ಪತ್ತೆಗೆ ತನಿಖೆ ನಡೆಯುತ್ತಿದೆ. ಆದಾಗ್ಯೂ, ಹಲವು ಮಂದಿ ಪರಿಷತ್ ಸದಸ್ಯರು ಎಸ್ ಐಟಿ, ನ್ಯಾಯಾಂಗ ತನಿಖೆ ಅಥವಾ ಸದನ ಸಮಿತಿಯಂತಹ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಮುಂದಿನ ಕ್ರಮ ಕೈಗೊಳ್ಳುವ ಮುನ್ನಾ ಮುಖ್ಯಮಂತ್ರಿ ಜೊತೆಗೆ ಚರ್ಚಿಸಲಾಗುವುದು ಎಂದು ಸದನಕ್ಕೆ ಸಚಿವರು ತಿಳಿಸಿದರು.
ಈ ವರ್ಷ ಆಗಸ್ಟ್‌ನಿಂದ ಆಸ್ಪತ್ರೆಗಳಲ್ಲಿ ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ದ್ರವ ಬಳಸಿದ ನಂತರ ಸಂಭವಿಸಿದ ಪ್ರತಿ ಬಾಣಂತಿಯರ ಸಾವಿನ ಕುರಿತು ತನಿಖೆಗೆ ನಿರ್ದೇಶಿಸಿದ್ದೇನೆ. ಎಷ್ಟು ಜನ ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ವರದಿ ಸಲ್ಲಿಸಲು ನಿರ್ದೇಶಿಸಿದ್ದೇನೆ. ಶೀಘ್ರದಲ್ಲಿಯೇ ಸತ್ಯಾಂಶ ಹೊರಬರಲಿದ್ದು, ಯಾವುದನ್ನು ಮುಚ್ಚಿಡಲು ಬಯಸುವುದಿಲ್ಲ. ಇಂತಹ ಸಾವಿನ ಘಟನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ನವೆಂಬರ್ 9 ಮತ್ತು 11 ರ ನಡುವೆ ದಿಢೀರ್ ಬಾಣಂತಿಯರ ಸಾವಿನ ಪ್ರಕರಣ ವರದಿಯಾಗಿದೆ. ಆಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ನಂತರ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ. ಆ ಮೂರು ದಿನಗಳಲ್ಲಿ ನಡೆಸಿದ 34 ಸಿಸೇರಿಯನ್ ಹೆರಿಗೆ ಪ್ರಕರಣಗಳಲ್ಲಿ ಏಳು ಪ್ರಕರಣಗಳಲ್ಲಿ ಸಮಸ್ಯೆಯಾಗಿದೆ. ಈ ಏಳು ಬಾಣಂತಿಯರ ಪೈಕಿ ಐವರು ಸಾವನ್ನಪ್ಪಿದ್ದರೆ, ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ರೂ. 5 ಲಕ್ಷ ಪರಿಹಾರಕ್ಕೆ ಆದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.
ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ದ್ರವ ಪೂರೈಸಿದ ಬಂಗಾಳದ Paschim Banga Pharmaceutical ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಅದರ ವಿರುದ್ಧ ತನಿಖೆ ನಡೆಸುವಂತೆ ಭಾರತದ ಔಷಧ ನಿಯಂತ್ರಕರಿಗೆ ಪತ್ರ ಬರೆಯಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.