ಮೈಸೂರು: ವಿಶಿಷ್ಟ ಅರಣ್ಯವನ್ನು ಹೊಂದಿರುವ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ವನ್ಯಧಾಮದಲ್ಲಿ ಹೊಸ ಪ್ರಭೇದದ ವರ್ಣರಂಜಿತ ಕಡಜವೊಂದು ಪತ್ತೆಯಾಗಿದೆ.
ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ ಅಂಡ್ ಎನ್ವಿರಾನ್‌ಮೆಂಟ್ (ATREE) ಸಂಶೋಧಕರಾದ ರಂಜಿತ್ ಎ ಪಿ ಮತ್ತು ಪ್ರಿಯದರ್ಶನನ್ ಧರ್ಮ ರಾಜನ್ ಅವರು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿ ರಂಗಸ್ವಾಮಿ ದೇವಸ್ಥಾನ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊಸ ಪ್ರಭೇದದ ಕಡಜವನ್ನು ಪತ್ತೆ ಮಾಡಿದ್ದಾರೆ.
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ದೇಶದ 4 ವಿವಿಧ ಭಾಗಗಳಲ್ಲಿ ಈ ಹೊಸ ಪ್ರಭೇದದ ಕಡಜವನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.
ತಮಿಳುನಾಡಿನ ಮುಂಡಂತುರೈ ಹುಲಿ ಸಂರಕ್ಷಿತ ಪ್ರದೇಶದ ಕಾಲಕ್ಕಾಡ್, ಅರುಣಾಚಲ ಪ್ರದೇಶದ ಸಿಯಾಂಗ್ ಕಣಿವೆ ಮತ್ತು ಉತ್ತರಾಖಂಡದ ತೆಹ್ರಿಗಳಲ್ಲಿ ಹೊಸ ಜಾತಿಯ ಕಡಜಗಳನ್ನು ಪತ್ತೆ ಮಾಡಲಾಗಿದೆ.
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಂಡುಬಂದಿರುವ ಈ ಕಡಜಕ್ಕೆ ಕಿಂಗ್ ಕೋಬ್ರಾದ ಸಂಶೋಧನೆ ಮತ್ತು ಸಂರಕ್ಷಣೆಯಲ್ಲಿ ಕೆಲಸ ಮಾಡಿದ ಡಾ ಪಿ ಗೌರಿಶಂಕರ್ ಅವರ ಹೆಸರನ್ನು ಇಡಲಾಗಿದೆ. ಕೆಲವು ತಿಂಗಳ ಹಿಂದೆ ಇದೇ ಸಂಶೋಧಕರ ತಂಡವು ಹೊಸ ಜಾತಿಯ ಹಲ್ಲಿ ಮತ್ತು ಕಡಜವನ್ನು ಪತ್ತೆ ಮಾಡಿತ್ತು.
ಸಂಶೋಧಕ ಪ್ರಿಯದರ್ಶನನ್ ಧರ್ಮ ರಾಜನ್ ಅವರು ಮಾತನಾಡಿ, ಈ ಸಂಶೋಧನೆಗಳು ಭಾರತದಲ್ಲಿನ ಶ್ರೀಮಂತ ಜೀವವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಗಳ ಪಾತ್ರಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.