ಬೆಳಗಾವಿ: ಮನೆಗೆ ನುಗ್ಗಿ ದುಷ್ಕರ್ಮಿಗಳು 9 ತಿಂಗಳ ತುಂಬು ಗರ್ಭಿಣಿ ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ನಡೆದಿದೆ.
ಸುವರ್ಣ ಮಾಂತಯ್ಯ ಮಠಪತಿ (35) ಮೃತ ಮಹಿಳೆ, ಮಹಿಳೆಗೆ ಈಗಾಗಲೇ ನಾಲ್ವರು ಹೆಣ್ಣು ಮಕ್ಕಳಿದ್ದು, ಐದನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಇನ್ನೊಂದು ವಾರದಲ್ಲಿ ಈಕೆ ಐದನೇ ಮಗುವಿಗೆ ಜನ್ಮ ನೀಡಬೇಕಿತ್ತು. ಮುಂದಿನ ಒಂದು ವಾರದಲ್ಲಿ ಹೆರಿಗೆಗೆ ದಿನಾಂಕವನ್ನು ವೈದ್ಯರು ನಿಗದಿ ಮಾಡಿದ್ದರು.
ಆದರೆ, ಶನಿವಾರ ಮನೆಯಲ್ಲಿ ಯಾರು ಇಲ್ಲದ ಸಂಧರ್ಭದಲ್ಲಿ ಹರಿತ ಆಯುಧಿಂದ ಸುವರ್ಣ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಮಹಿಳೆಯ ಪತಿ ಮಧ್ಯಾಹ್ನ ಹಸುಗಳಿಗೆ ಮೇವು ತರಲು ತೋಟಕ್ಕೆ ಹೋಗಿದ್ದರು. ಮಕ್ಕಳು ಕೂಡ ಶಾಲೆಗೆ ಹೋಗಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಮಯದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೋಟದಿಂದ ಮೇವು ತಂದ ಪತಿಯು ತನ್ನ ಪತ್ನಿಯನ್ನು ಕರೆದರೂ ಮನೆಯಿಂದ ಹೊರಗೆ ಬಂದಿಲ್ಲ. ಆಗ ಸಮೀಪ ಬಂದು ನೋಡಿದಾಗ ಗರ್ಭಿಣಿಯು ರಕ್ತದ ಮಡಿಲಿನಲ್ಲಿ ಬಿದ್ದು ನರಳಾಡುತ್ತಿರುವುದು ಕಂಡುಬಂದಿದೆ.
ತಕ್ಷಣವೇ ಪಕ್ಕದ ಹಾರೂಗೇರಿ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಗಂಭೀರವಾಗಿ ಗಾಯಗೊಂಡ ಮಹಿಳೆ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕೊಲೆ ಆರೋಪಿಗಳು ಯಾರು? ನಿಖರ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಮೃತ ಸುವರ್ಣ 18 ವರ್ಷಗಳ ಹಿಂದೆ, ಮಹಾಂತಯ್ಯಾ ದುಂಡಯ್ಯಾ ಮಠಪತಿ ಅವರನ್ನು ವಿವಾಹವಾಗಿದ್ದರು.