ಸಂಗ್ರಹ ಚಿತ್ರ 
ರಾಜ್ಯ

ಕಾರ್ಮಿಕ ಇಲಾಖೆಯೊಂದಿಗಿನ ಸಭೆ ಮುಂದೂಡಿಕೆ: ತೂಗುಯ್ಯಾಲೆಯಲ್ಲಿ ಸಾರಿಗೆ ನೌಕರರ ಮುಷ್ಕರ!

ಕಾರ್ಮಿಕ ಸಂಘದ ಮುಖಂಡ ಎಚ್.ವಿ.ಅನಂತ ಸುಬ್ಬರಾವ್ ನೇತೃತ್ವದಲ್ಲಿ ಕಾರ್ಮಿಕ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುತ್ತದೆ ಎಂದು ಸದಸ್ಯರು ಹೇಳಿದ್ದಾರೆ.

ಬೆಂಗಳೂರು: ರಸ್ತೆ ಸಾರಿಗೆ ನಿಗಮಗಳ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಡಿಸೆಂಬರ್ 31ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಶುಕ್ರವಾರ ನಡೆಯಬೇಕಿದ್ದ ಸಭೆಯನ್ನು ಸೋಮವಾರಕ್ಕೆ (ಡಿಸೆಂಬರ್ 30) ಮುಂದೂಡಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಸದಸ್ಯರನ್ನು ಒಳಗೊಂಡ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

ಕಾರ್ಮಿಕ ಸಂಘದ ಮುಖಂಡ ಎಚ್.ವಿ.ಅನಂತ ಸುಬ್ಬರಾವ್ ನೇತೃತ್ವದಲ್ಲಿ ಕಾರ್ಮಿಕ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುತ್ತದೆ ಎಂದು ಸದಸ್ಯರು ಹೇಳಿದ್ದಾರೆ.

ಸಾರಿಗೆ ನೌಕರರ ಬೇಡಿಕೆ ಈಡೇರಿಲ್ಲ ಹಾಗಾಗಿ ಮುಷ್ಕರ ಶತಸಿದ್ಧ. ನಾವು ಮುಷ್ಕರ ಮಾಡುತ್ತೇವೆ ಎಂದು ಸಚಿವರಿಗೆ ನೋಟಿಸ್​ ಕೊಟ್ಟಿದ್ದೇವೆ. ಸಾರಿಗೆ ಇಲಾಖೆ ನೌಕರರು ಸಹ ಮುಷ್ಕರಕ್ಕೆ ಸಿದ್ಧರಾಗಿದ್ದಾರೆ. ಮುಷ್ಕರಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಸರ್ಕಾರ ನಮ್ಮನ್ನು ಕರೆದು ಚರ್ಚಿಸಲಿ ಎಂದು ನೋಟಿಸ್ ನೀಡಿದ್ದೇವೆ. ಆದರೆ, ಸರ್ಕಾರ ಈವರೆಗೆ ಯಾವುದೇ ‌ರೀತಿಯಲ್ಲಿ ಸ್ಪಂದಿಸಿಲ್ಲ. ಬದಲಿಗೆ ಮುಷ್ಕರ ಮಾಡಿದರೆ ಎಸ್ಮಾ ಜಾರಿ ಮಾಡುತ್ತೇವೆಂದು ಹೇಳಿದ್ದಾರೆ. ಈ ಹಿಂದೆ ಎಸ್ಮಾ ಜಾರಿ ಮಾಡಿದ್ದ ಸರ್ಕಾರ ಭಸ್ಮ ಆಗೋಗಿದೆ. ಸಿದ್ದರಾಮಯ್ಯ ಇಂತಹ ದುಸ್ಸಾಹಸಕ್ಕೆ ಕೈಹಾಕಲ್ಲ ಅಂದ್ಕೊಂಡಿದ್ದೇನೆ. ನಮ್ಮ ಬೇಡಿಕೆಗಳು ಈಡೇರಿಲ್ಲ ಹಾಗಾಗಿ ಮುಷ್ಕರ ಶತಸಿದ್ಧ. ಮುಷ್ಕರ ಮಾಡಿಸೋದು, ತಪ್ಪಿಸುವುದು ಸಿಎಂ ಕೈಯಲ್ಲಿದೆ ಎಂದು ತಿಳಿಸಿದರು.

2020 ರ ಜನವರಿ 1 ರಿಂದ 38 ತಿಂಗಳ ವೇತನ ಹಿಂಬಾಕಿ ಪಾವತಿಸಬೇಕು. ಜನವರಿ 2024 ರಿಂದ ಹೊಸ ವೇತನ ಪರಿಷ್ಕರಣೆ ಹಾಗೂ ಇತರ ಬೇಡಿಕೆ ಇತ್ಯರ್ಥಪಡಿಸಬೇಕು. ನಿವೃತ್ತರಾದ ನೌಕರರಿಗೆ 2024ರ ಜೂನ್ 27ರ ಸುತ್ತೋಲೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಸಾರಿಗೆ ಸಂಸ್ಥೆಗಳಲ್ಲಿ ಮಾನ್ಯತೆಗಾಗಿ ತುರ್ತಾಗಿ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಬೇಕು. ಕೆಎಸ್​ಆರ್​ಟಿಸಿಯಲ್ಲಿ ಜಾರಿಗೆ ತರುತ್ತಿರುವ ನಗದು ರಹಿತ ಆರೋಗ್ಯ ಚಿಕಿತ್ಸೆ ಯೋಜನೆಯನ್ನು ಏಕಕಾಲದಲ್ಲಿ 4 ನಿಗಮಗಳಲ್ಲಿ ಜಾರಿಗೆ ತರಬೇಕು. ಸಂಸ್ಥೆಯಲ್ಲಿ ವಿದ್ಯುತ್‌ ಚಾಲಿತ ಬಸ್ಸುಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಪದ್ಧತಿಯನ್ನು ಕೈಬಿಟ್ಟು, ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿ ನಿರ್ವಹಣೆ ಮಾಡಬೇಕು. ಹೊರ ಗುತ್ತಿಗೆ ಆಧಾರದ ಮೇಲೆ ಚಾಲಕ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿ ನೇಮಕಾತಿಯನ್ನು ಕೈಬಿಡಬೇಕು ಎಂಬುದು ಸಾರಿಗೆ ನೌಕರರ ಆಗ್ರಹವಾಗಿದೆ.

ಆದಾಗ್ಯೂ, ಸಾರಿಗೆ ಇಲಾಖೆಯು 224.05 ಕೋಟಿ ರೂ.ಗಳನ್ನು ಗ್ರಾಚ್ಯುಟಿಗಾಗಿ ವಿತರಿಸಿದ್ದು, 11,694 ನಿವೃತ್ತ ಉದ್ಯೋಗಿಗಳಿಗೆ ರಜೆಯ ನಗದನ್ನು ವಿತರಿಸಿದೆ. ಜನವರಿ 1, 2020 ರಿಂದ ಬಾಕಿ ಹಣವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಡಿಸೆಂಬರ್ 21 ರಂದು ವಿತರಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಸರ್ಕಾರವು ಈಗಾಗಲೇ ನೌಕರರ ಸಮಸ್ಯೆ ಆಲಿಸುವುದಾಗಿ ತಿಳಿಸಿದ್ದು, ಮುಷ್ಕರ ಕರೆ ವಾಪಸ್ ಪಡೆಯುವಂತೆ ಮಾಡಲು ಮತ್ತೊಮ್ಮೆ ಪ್ರಯತ್ನ ನಡೆಸಲಿದೆ. ಡಿಸೆಂಬರ್ 31 ರಂದು ವರ್ಷಾಂತ್ಯವಾಗಿರುವುದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗಲಿದೆ. ಹೀಗಾಗಿ ನೌಕರರ ಮನವೊಲಿಸಲುವ ಪ್ರಯತ್ನ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT