ರಾಜ್ಯ

ಕಣ್ಣು ಕುಕ್ಕುವ ಎಲ್​ಇಡಿ ಲೈಟ್'ನಿಂದ ವಾಹನ ಸವಾರರಿಗೆ ಕಿರಿಕಿರಿ: ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್

Manjula VN

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ವಿವಿಧ ಭಾಗಗಳ ರಸ್ತೆಗಳಲ್ಲಿ ಆಭರಣ ಮಳಿಗೆಗಳು ಪ್ರಕಾಶಮಾನ ಎಲ್‌ಇಡಿ ದೀಪಗಳ ಡಿಜಿಟಲ್‌ ನಾಮಫಲಕ ಹಾಗೂ ಜಾಹೀರಾತು ಫಲಕಗಳನ್ನು ಅಳವಡಿಸಿ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿವೆ ಎಂದು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಹೈಕೋರ್ಟ್, ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ವಕೀಲೆ ದೀಕ್ಷಾ ಅಮೃತೇಶ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಮತ್ತು ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠವು ನೋಟಿಸ್​ ಜಾರಿ ಮಾಡಿ, ವಿಚಾರಣೆಯನ್ನು ಮುಂದೂಡಿತು.

ಅಲ್ಲದೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ), ಬಿಬಿಎಂಪಿ ಮುಖ್ಯ ಆಯುಕ್ತರು, ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಹಾಗೂ ಮಲ್ಲೇಶ್ವರ ಸಂಚಾರ ಉತ್ತರ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅಮೃತೇಶ್ ವಾದ ಮಂಡಿಸಿ, ''ಮಲ್ಲೇಶ್ವರದ ಸಂಪಿಗೆ ರಸ್ತೆಯ ವೆಂಡಿ, ಎವಿಆರ್‌ ಸ್ವರ್ಣ ಮಹಲ್‌, ಓರಾ ಮತ್ತು ತನಿಷ್ಕ್‌ ಮತ್ತಿತರ ಚಿನ್ನಾಭರಣ ಮಳಿಗೆಗಳು ಹೆಚ್ಚಿನ ಹೊಳಪಿನ ಎಲ್‌ಇಡಿ ನಾಮಫಲಕ ಹಾಗೂ ಜಾಹೀರಾತು ಫಲಕ ಅಳವಡಿಸಿವೆ. ನೆಲದ ಮಟ್ಟದಿಂದ ಬಹು ಎತ್ತರಕ್ಕೆ ಮುಖ್ಯರಸ್ತೆಗೆ ಮುಖ ಮಾಡಿ ಜಾಹೀರಾತುಗಳನ್ನು ಅಳವಡಿಸಲಾಗಿದೆ. ಅವು ಸುರಕ್ಷತಾ ಮಿತಿಗಿಂತ ಹೆಚ್ಚಿನ ಹೊಳಪನ್ನು ಹೊರಸೂಸುತ್ತಿವೆ. ಇದರಿಂದ ರಾತ್ರಿ ಸಮಯದಲ್ಲಿ ಸಾರ್ವಜನಿಕರಿಗೆ, ಅದರಲ್ಲೂ ಸಂಚಾರ ದಟ್ಟಣೆಯಲ್ಲಿ ಸಿಲುಕಿದ ವಾಹನ ಸವಾರರು ಮತ್ತು ಚಾಲಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ'' ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಹಲವು ಅಧ್ಯಯನಗಳ ಪ್ರಕಾರ ಎಲ್‌ಇಡಿ ಜಾಹೀರಾತು ಫಲಕಗಳಿಂದ ಹೊರಹೊಮ್ಮುವ ಪ್ರಕಾಶಮಾನವಾದ ಬೆಳಕು, ಜನರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಬಿಬಿಎಂಪಿ ಜಾಹೀರಾತು ಅಧಿನಿಯಮ-2021ರ ಅಡಿಯಲ್ಲಿ ಎಲ್‌ಇಡಿ ಜಾಹೀರಾತು ಫಲಕಗಳ ಪ್ರದರ್ಶನಕ್ಕೆ ನಿರ್ದಿಷ್ಟ ಮಾರ್ಗಸೂಚಿ ರೂಪಿಸಲಾಗಿದೆ. ಅವುಗಳಿಗೆ ತದ್ವಿರುದ್ಧವಾಗಿ ಈ ಮಳಿಗೆಗಳು ಜಾಹೀರಾತು ಫಲಕ ಅಳವಡಿಸಿವೆ'' ಎಂದು ವಿವರಿಸಿದರು.

ಅಲ್ಲದೆ, ಎಲ್‌ಇಡಿ ದೀಪಗಳ ಡಿಜಿಟಲ್‌ ಹೊರಾಂಗಣ ಜಾಹೀರಾತಿಗಾಗಿ ಸುರಕ್ಷತಾ ಮಾನದಂಡ ಜಾರಿಗೊಳಿಸಬೇಕಿದೆ. ಅದರಿಂದ ಉಂಟಾಗುವ ಸಂಭಾವ್ಯ ವಾಹನ ಅಪಘಾತಗಳನ್ನು ತಗ್ಗಿಸಬಹುದಾಗಿದೆ. ಈ ಕುರಿತು ಕ್ರಮ ಜರುಗಿಸುವಂತೆ ಕೋರಿ 2023ರ ಆಗಸ್ಟ್​ 21ಮತ್ತು ನವೆಂಬರ್​ 4ರಂದು ಅರ್ಜಿದಾರರು ಪ್ರತಿವಾದಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ, ಪ್ರತಿವಾದಿಗಳು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಅರ್ಜಿದಾರರ ಮನವಿ ಪರಿಗಣಿಸಿ ಪ್ರಕಾಶಮಾನ ಸಂಪಿಗೆ ರಸ್ತೆಯಲ್ಲಿರುವ ಮಳಿಗೆಗಳ ಎಲ್‌ಇಡಿ ನಾಮಫಲಕ, ಜಾಹೀರಾತು ಫಲಕಗಳ ಅಳವಡಿಕೆ ತಡೆಯುವಂತೆ ಸರ್ಕಾರ ಸೇರಿದಂತೆ ಅರ್ಜಿಯಲ್ಲಿನ ಇತರೆ ಪ್ರತಿವಾದಿಗಳಿಗೆ ಸೂಚಿಸಬೇಕು ಎಂದು ಕೋರಿದರು.

SCROLL FOR NEXT