ಬಸನಗೌಡ ಪಾಟೀಲ್ ಯತ್ನಾಳ್ 
ರಾಜ್ಯ

‘ಲೋಕಸಭಾ ಚುನಾವಣೆಯಲ್ಲಿ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಿ: ಯತ್ನಾಳ್ ಆಗ್ರಹ

ಶಿವಮೊಗ್ಗ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ.

ಶಿವಮೊಗ್ಗದ ಚೌಕಿ ಮಠದಲ್ಲಿ ಲಿಂಗದೀಕ್ಷೆ ಪೂಜೆ ನಡೆಸಿದ ಜಯಮೃತ್ಯುಂಜಯ ಶ್ರೀಗಳು ಅಲ್ಲಿಂದ ತಮ್ಮ ಹೋರಾಟಕ್ಕೆ ಚಾಲನೆ ನೀಡಿದರು.

ಚೌಕಿ ಮಠದಿಂದ ಹೊರಟ ಮೆರವಣಿಗೆಯು ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆಯ ಮೂಲಕ ಟಿ.ಎಸ್ ಶೀನಪ್ಪ‌ ಶೆಟ್ಟಿ ವೃತ್ತದವರೆಗೂ ಸಾಗಿತು. ಈ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಸಭೆಯಲ್ಲಿ ಯತ್ನಾಳ್ ಸೇರಿದಂತೆ ಪಂಚಮಸಾಲಿ ಸಮುದಾಯದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ಭಾಗಿಯಾಗಿದ್ದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಯತ್ನಾಳ್ ಅವರು, ನಮ್ಮ ಹೋರಾಟ ಸಮುದಾಯದ‌ ಭವಿಷ್ಯದ ಸಲುವಾಗಿ ನಡೆಸಲಾಗುತ್ತಿದೆ.‌ ಇದು ಯಾರನ್ನೂ ಮುಖ್ಯಮಂತ್ರಿ ಮಾಡಲು, ಒಂದು‌ ಪಕ್ಷವನ್ನು ಕೈಯಲ್ಲಿ ಇಟ್ಟುಕೊಳ್ಳಲು ಅಥವಾ ಕೇವಲ ವೀರಶೈವ ಲಿಂಗಾಯತಕ್ಕೆ ಅಷ್ಟೇ ಅಲ್ಲ. ಇದು ದಲಿತರು, ಹಿಂದುಳಿದವರು, ಮರಾಠರು ಸೇರಿದಂತೆ ಎಲ್ಲರನ್ನು ಒಳಗೊಂಡು ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತಿದೆ.

ನಾನು ಸದನದಲ್ಲಿ ಒಂದು ಸಮುದಾಯದ ಪರ ಮಾತನಾಡಿಲ್ಲ. ನಾನು ಹಿಂದೂ ಸಮಾಜದ ಪರವಾಗಿ ಮಾತನಾಡಿದ್ದೇನೆ. ಎಲ್ಲ ಸಮುದಾಯಗಳ ಪರವಾಗಿ ಹೋರಾಟ ಮಾಡಿದ್ದೇವೆ. ದಾವಣಗೆರೆಯಲ್ಲಿ ನಡೆದ ವೀರಶೈವರ ಸಭೆಯಲ್ಲಿ ನಾವು ಹಿಂದೂಗಳಲ್ಲ ಎಂದು ತೀರ್ಮಾನ‌ ಮಾಡಿದ್ದಾರೆ. ನಾವು ಹಿಂದೂಗಳು ಅಲ್ಲ ಎಂದರೆ, ಭಾರತದಲ್ಲಿ ನಮಗೆ ಜಾಗವೇ ಇಲ್ಲ. ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳು.‌ ನಮ್ಮ ಹೋರಾಟವನ್ನು ಹಾಳು ಮಾಡಬೇಕು.‌ ಪಾದಯಾತ್ರೆ ನಡೆಯಬಾರದು ಎಂದು ಸಾಕಷ್ಟು ಜನ ಕೆಲಸ ಮಾಡಿದ್ದರು. ನಮ್ಮ ಗುರುಗಳಿಗೆ 10 ಕೋಟಿ ರೂ. ತೆಗೆದುಕೊಂಡ ಹೊಸಪೇಟೆಗೆ ನಮ್ಮ ಸಮಾಜದ ಮಂತ್ರಿಗಳು ಬಂದಿದ್ದರು. ಆದರೆ 10 ಕೋಟಿ ರೂ. ತೆಗೆದುಕೊಂಡು ನಮ್ಮ ಸಮಾಜವನ್ನು ನಾನು ಹಾಳು ಮಾಡಲ್ಲ ಎಂದು ಶ್ರೀಗಳು ಹೇಳಿದ್ದರು. ನಮಗೆ ರಾಜಕೀಯವಾಗಿ ಮೀಸಲಾತಿ ಬೇಡ. ನಮ್ಮ ಸಮುದಾಯದ ಬಡ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಮೀಸಲಾತಿ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.

ಪಕ್ಷದಲ್ಲಿ ನಾನು ಯಾವ ಸ್ಥಾನವನ್ನು ಕೇಳಿಲ್ಲ. ನಾನು ಈಗ ಸ್ವತಂತ್ರ ಹಕ್ಕಿ. ಮೈಸೂರಿನಲ್ಲಿ ಹಳ್ಳಿ ಹಕ್ಕಿ, ನಾನು ಸ್ವತಂತ್ರ ಹಕ್ಕಿ. ದೆಹಲಿಯಲ್ಲಿ ರಾಜ್ಯದ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ನಾನು ಯಾರಿಗೂ ಹೆದರುವುದಿಲ್ಲ. 2024 ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗಬೇಕು. ಭಾರತ ಭಾರತವಾಗಿ ಉಳಿಯಬೇಕಿದೆ ಎಂದು ತಿಳಿಸಿದರು.

ನಮ್ಮ ಪ್ರತಿಭಟನೆ ಲಿಂಗಾಯತ ಸಮುದಾಯವನ್ನು ವಿಭಜಿಸುವ ಕ್ರಮ ಎಂದು ಹಲವರು ಬಣ್ಣಿಸಿದ್ದಾರೆ, ಈ ಪ್ರತಿಭಟನೆ ನ್ಯಾಯ ಒದಗಿಸುವ ಪ್ರಯತ್ನವಾಗಿದೆ. ಸಮುದಾಯಕ್ಕೆ ಮೀಸಲಾತಿ ಸಿಕ್ಕರೆ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ದೊರೆಯಲಿದೆ. ಪಂಚಮಸಾಲಿಗಳನ್ನು 2ಎ ವರ್ಗಕ್ಕೆ ಸೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು. ಒಂದು ವೇಳೆ ಸ್ಪಂದನೆ ಸಿಗದೇ ಹೋದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಸವ ಜಯಮೃತ್ಯುಂಜಯ ಸ್ವಾಮಿ ಮಾತನಾಡಿ, ಹೊಸ ಸರ್ಕಾರ ಬಂದಾಗ ಮೀಸಲಾತಿ ಹೋರಾಟ ಮಾಡಲ್ಲ ಎಂಬ ತಪ್ಪು ಸಂದೇಶ ಸಾರಿದ್ದರು. ಆದರೆ, ನಮಗೆ ಮೀಸಲಾತಿ ಸಿಗುವವರೆಗೂ ಹೋರಾಟ ನಡೆಸುತ್ತೇವೆ. ಶಿವಮೊಗ್ಗದಲ್ಲಿ ಹೋರಾಟ‌ ಮಾಡಲು ಎಂಟೆದೆ ಬೇಕಾಗುತ್ತದೆ. ನಮ್ಮ ಸಮಾಜಕ್ಕೆ ಮೀಸಲಾತಿ ಸಿಗಬಾರದು ಎಂದು ಅಡ್ಡ ಮಾಡಿದ ವ್ಯಕ್ತಿಗಳು ಇರುವ ಕ್ಷೇತ್ರದಲ್ಲಿ ಹೋರಾಟ ಮಾಡುತ್ತಿದ್ದೇವೆ. ನಮ್ಮದು ಸರ್ಕಾರದ ವಿರುದ್ಧ ಹೋರಾಟವೇ ಹೊರತು ವ್ಯಕ್ತಿಗಳ ವಿರುದ್ದದ ಹೋರಾಟ ಅಲ್ಲ. ನಮ್ಮದು ಅಖಂಡ ಮೀಸಲಾತಿಗಾಗಿ ಹೋರಾಟ. ನಮಗೆ ಹೋರಾಟ ಮಾಡಲು ಅವಕಾಶ ನೀಡಿದ್ದರೆ, ನಾಯಕರಾಗಿ ಬೆಳೆಯುತ್ತೇವೆ ಎಂದು ತಿಳಿದು ನಮಗೆ ಅವಕಾಶ ನೀಡಿಲ್ಲ. ಲೋಕಸಭೆ ಚುನಾವಣೆಯ ಒಳಗೆ ಮೀಸಲಾತಿ ನೀಡದೇ ಹೋದರೆ ಚುನಾವಣೆಯಲ್ಲಿ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT