ಕನ್ನಡ ಕಡ್ಡಾಯ
ಕನ್ನಡ ಕಡ್ಡಾಯ ಸಂಗ್ರಹ ಚಿತ್ರ
ರಾಜ್ಯ

ಶೇ.60ರಷ್ಟು ಕನ್ನಡ ಕಡ್ಡಾಯ ನೀತಿ ಅನುಷ್ಠಾನದಲ್ಲಿ ವಿಫಲ: ಬಿಬಿಎಂಪಿ ಅಧಿಕಾರಿ ಅಮಾನತು!

Srinivasamurthy VN

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ನೀತಿಯನ್ನು ಅನುಷ್ಠಾನ ಮಾಡುವಲ್ಲಿ ವಿಫಲವಾದ ಆರೋಪದ ಮೇರೆಗೆ ಬಿಬಿಎಂಪಿ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ.

ಶೇ.60ರಷ್ಟು ಕನ್ನಡ ನಿಯಮ ಜಾರಿ ಮಾಡದ ಟಿ.ಸಿ.ಪಾಳ್ಯದ ಅಂಗಡಿಗಳ ನಾಮಫಲಕಕ್ಕೆ ಹಾನಿ ಮಾಡಿದ ಆರೋಪದ ಮೇಲೆ ಹಿರಿಯ ಆರೋಗ್ಯ ನಿರೀಕ್ಷಕ ಕೆ.ಎಲ್.ವಿಶ್ವನಾಥ್ ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಮಾನತು ಮಾಡಿದೆ.

ಬಿಬಿಎಂಪಿ ಮಹದೇವಪುರ ವಲಯದ ಜಂಟಿ ಆಯುಕ್ತರ ಆದೇಶದ ಪ್ರಕಾರ, ರಾಜ್ಯ ಸರ್ಕಾರವು ಅಂಗಡಿಗಳಿಗೆ ನಿಯಮವನ್ನು ಜಾರಿಗೆ ತರಲು ಫೆಬ್ರವರಿ 28 ರ ಗಡುವನ್ನು ನಿಗದಿಪಡಿಸಿದೆ. ಅಧಿಕಾರಿ ತರಾತುರಿಯಲ್ಲಿ ವರ್ತಿಸಿ ಗಲಾಟೆ ಸೃಷ್ಟಿಸಿ ಬಿಬಿಎಂಪಿ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ. ಆದ್ದರಿಂದ ಅವರ ಕ್ರಮಗಳು ಕರ್ತವ್ಯಲೋಪಕ್ಕೆ ಒಳಪಡುವುದರಿಂದ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏನಿದು ಘಟನೆ?

ನಗರದಲ್ಲಿ ಅಂಗಡಿ ಮುಂಗಟ್ಟುಗಳು ಹಾಗೂ ವಾಣಿಜ್ಯ ಮಳಿಗೆಗಳ ಮೇಲೆ ಹಾಕಲಾಗುವ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಗೆ ಪ್ರಾಶಸ್ತ್ರ ನೀಡಬೇಕು ಒಂದು ವೇಳೆ ಈ ನಿಯಮ ತಪ್ಪುವ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಅನ್ಯಭಾಷೆಯಲ್ಲಿರುವ ಫಲಕಗಳನ್ನು ಬಟ್ಟೆಯಿಂದ ಮುಚ್ಚಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಆದೇಶ ಹೊರಡಿಸಿದ್ದರು. ಕನ್ನಡ ಅನುಷ್ಠಾನ ಜಾರಿಗೊಳಿಸದ ಮಳಿಗೆಗಳ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಆಯಾ ವಲಯಗಳ ಹಿರಿಯ ಆರೋಗ್ಯ ಪರಿವೀಕ್ಷಕರಿಗೆ ನೀಡಲಾಗಿತ್ತು.

ಆದರೆ, ಮಹದೇವಪುರ ವಲಯದ ಹಿರಿಯ ಆರೋಗ್ಯ ಪರಿವೀಕ್ಷಕ ವಿಶ್ವನಾಥ್ ಅವರು ಆಯುಕ್ತರ ಆದೇಶಕ್ಕೂ ಕಿಮ್ಮತ್ತು ನೀಡದೆ ಬೇಜವಾಬ್ದಾರಿತನ ಪ್ರದರ್ಶಿಸಿರುವುದು ಕಂಡು ಬಂದಿತ್ತು. ವಿಶ್ವನಾಥ್ ಅವರ ಈ ಬೇಜವಬ್ದಾರಿತನವನ್ನು ಗಂಭೀರವಾಗಿ ಪರಿಗಣಿಸಿರುವ ಮಹದೇವಪುರ ವಲಯ ಜಂಟಿ ಆಯುಕ್ತರು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಆದೇಶದ ಮೇರೆಗೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಮಾನತುಗೊಂಡಿರುವ ವಿಶ್ವನಾಥ್ ಅವರಿಗೆ ಕೆಸಿಎಸ್‍ಆರ್ ನಿಯಮದಂತೆ ಜೀವಾನಾಧರ ಭತ್ಯೆ ನೀಡಬೇಕು ಹಾಗೂ ಅವರು ಕೇಂದ್ರ ಸ್ಥಾನಬಿಟ್ಟು ಬೇರೆಡೆಗೆ ತೆರಳದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ವೈದ್ಯಾಧಿಕಾರಿಗಳಿಗೆ ಜಂಟಿ ಆಯುಕ್ತರು ಸೂಚನೆ ನೀಡಿದ್ದಾರೆ.

SCROLL FOR NEXT