ರಾಜ್ಯ

ಮಂಡ್ಯ: ಹೆತ್ತ ತಾಯಿಯನ್ನು ಕೊಂದ ಮಗಳು, ಅಳಿಯನ ಬಂಧನ

Lingaraj Badiger

ಮಂಡ್ಯ: ತಾನು ಮುದ್ದಾಗಿ ಸಾಕಿ, ಬೆಳೆಸಿದ್ದ ತನ್ನ ಏಕೈಕ ಮಗಳಿಂದಲೇ ಮಹಿಳೆಯೊಬ್ಬರು ಹತ್ಯೆಗೀಡಾಗಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಹೆಬ್ಬಕವಾಡಿ ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ.

ಘಟನೆ ನಡೆದು 13 ತಿಂಗಳ ಬಳಿಕ ಪ್ರಕರಣವನ್ನು ಭೇದಿಸಿದ ಪೊಲೀಸರು ಹೆತ್ತ ತಾಯಿಯನ್ನು ಹತ್ಯೆ ಮಾಡಿದ ಮಹಿಳೆ ಹಾಗೂ ಆಕೆಯ ಪತಿಯನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಮೈಸೂರು ಜಿಲ್ಲೆಯ ಹಾರೋಹಳ್ಳಿ ನಿವಾಸಿ ಅನುಷಾ ಮತ್ತು ಆಕೆಯ ಪತಿ ದೇವರಾಜು ಎಂದು ಗುರುತಿಸಲಾಗಿದೆ.

ದೇವರಾಜು, ಹತ್ಯೆಯಾದ 52 ವರ್ಷದ ತನ್ನ ಅತ್ತೆ ಶಾರದಮ್ಮ ಅವರ ಶವವನ್ನು ಮುಚ್ಚಿಡಲು ಪತ್ನಿಗೆ ಸಹಾಯ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಶಾರದಮ್ಮನನ್ನು ಕೊಂದ ನಂತರ, ಅನುಷಾ ತಾನು ಅವರೊಂದಿಗೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾಳೆ. ಆದರೆ, ಈ ಸಂಬಂಧ ಮೈಸೂರು ಜಿಲ್ಲೆಯ ವರುಣಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ದಂಪತಿಗಳು ವ್ಯತಿರಿಕ್ತ ಹೇಳಿಕೆ ನೀಡಿದ ನಂತರ, ಪೊಲೀಸರು ಅನುಮಾನಗೊಂಡು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಶಾರದಮ್ಮ ಅವರನ್ನು ಹತ್ಯೆ ಮಾಡಿ, ಹೂತು ಹಾಕಿರುವುದಾಗಿ ಒಪ್ಪಿಕೊಂಡಿದ್ದಾರೆ.

ಶಾರದಮ್ಮಅವರ ಏಕೈಕ ಮಗಳಾಗಿದ್ದ ಅನುಷಾ, ನವೆಂಬರ್ 22, 2022 ರಂದು ತಾಯಿಯ ಮನೆಗೆ ಹೋಗಿದ್ದಳು, ಈ ವೇಳೆ ಅವರ ಕಣ್ಣಿನ ಚಿಕಿತ್ಸೆ ವಿಚಾರಕ್ಕೆ ತಾಯಿಯೊಂದಿಗೆ ಜಗಳವಾಡಿದ್ದಳು.

ಶಾರದಮ್ಮ ಕೋಪದಿಂದ ಮಗಳಿಗೆ ದೊಣ್ಣೆಯಿಂದ ಹೊಡೆಯಲು ಹೋಗಿದ್ದಾರೆ. ಈ ವೇಳೆ ಅನುಷಾ ತಾಯಿಯನ್ನು ಜೋರಾಗಿ ತಳ್ಳಿದ್ದಾಳೆ. ಶಾರದಮ್ಮನ ತಲೆ ಮಂಚದ ಅಂಚಿಗೆ ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಂಧನದ ಭೀತಿಯಿಂದ ದಂಪತಿ ಶವವನ್ನು ಗ್ರಾಮದ ಹೊರವಲಯದಲ್ಲಿರುವ ಸ್ಮಶಾನಕ್ಕೆ ಸಾಗಿಸಿ ಅಲ್ಲಿಯೇ ಹೂತು ಹಾಕಿದ್ದರು.

ಸಂಬಂಧಿಕರ ಒತ್ತಡ ಹೆಚ್ಚಾದಾಗ ಅನುಷಾ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.

ಇದೀಗ ಪ್ರಕರಣವನ್ನು ಮಂಡ್ಯ ಗ್ರಾಮಾಂತರ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಮೃತದೇಹವನ್ನು ಹೊರತೆಗೆದು ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

SCROLL FOR NEXT