ರಾಜ್ಯ

ಸಮಾಜದಲ್ಲಿನ ತಪ್ಪುಗಳನ್ನು ಸರಿಪಡಿಸುವ ಶಕ್ತಿ, ಸಾಮರ್ಥ್ಯ ಮಠಾಧೀಶರಿಗೆ ಇದೆ: ಯುಟಿ ಖಾದರ್

Manjula VN

ಉಡುಪಿ: ಸಾಂಪ್ರದಾಯಿಕ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಹೊಸ ಪೀಳಿಗೆಗೆ ತಲುಪಿಸಲು ಪರ್ಯಾಯ ದರ್ಬಾರ್‌ನಂತಹ ಧಾರ್ಮಿಕ ಕಾರ್ಯಕ್ರಮಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಗುರುವಾರ ಹೇಳಿದರು.

ಉಡುಪಿ ಕೃಷ್ಣ ಮಠದ ಪುತ್ತಿಗೆ ಪರ್ಯಾಯ ದರ್ಬಾರ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಡುಪಿಯಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದ ಭಾಗವಾಗಲು ನನಗೆ ಸಂತೋಷವಾಗುತ್ತಿದೆ. ಇದನ್ನು ವಿಶೇಷವೆಂದೇ ಪರಿಗಣಿಸುತ್ತೇನೆ. ಈ ಕಾರ್ಯಕ್ರಮಗಳು ಯುವ ಪೀಳಿಗೆಗೆ ಸಂಸ್ಕೃತಿ ಮತ್ತು ಮೌಲ್ಯಗಳನ್ನು ತಿಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಸಮಾಜದಲ್ಲಿ ನಡೆಯುವ ಯಾವುದೇ ದೋಷಗಳನ್ನು ಸರಿಪಡಿಸುವ ಶಕ್ತಿ ಮತ್ತು ಸಾಮರ್ಥ್ಯ ಮಠಾಧೀಶರಿಗೆ ಇದೆ. ಸಮಾಜ ಒಡೆದು ಹೋಗುವ ಸಂದರ್ಭದಲ್ಲಿ ಮಠಾಧೀಶರು ಕೈ ಜೋಡಿಸಬೇಕು. ಇವರು ಜನರಿಗೆ ಸರಿಯಾದ ಮಾರ್ಗವನ್ನು ತೋರಿಸಬಲ್ಲರು ಎಂದು ತಿಳಿಸಿದರು.

ಶ್ರೀಕೃಷ್ಣ ಮಠದ 252ನೇ ಪರ್ಯಾಯ ಮಹೋತ್ಸವದ ಅಂಗವಾಗಿ ರಾಜಾಂಗಣದಲ್ಲಿ ದರ್ಬಾರ್ ಕಾರ್ಯಕ್ರಮ ನಡೆಯಿತು. ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಗುರುವಾರ ನಾಲ್ಕನೇ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯೂ ಆದ ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.

SCROLL FOR NEXT