ರಾಜ್ಯ

ವಿಜಯಪುರ: ಗಣರಾಜ್ಯೋತ್ಸವ ವೇಳೆ ಕುಶಾಲತೋಪು ಹಾರಿಸುವಾಗ ಗ್ರಾ.ಪಂ. ಅಧ್ಯಕ್ಷೆ ಕಾಲಿಗೆ ಗುಂಡೇಟು

Manjula VN

ಇಂಡಿ(ವಿಜಯಪುರ): ಹಿರೇರೂಗಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಕುಶಾಲತೋಪು( ಗಾಳಿಯಲ್ಲಿ ಗುಂಡು) ಹಾರಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡು ಹಾರಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಾಲಿಗೆ ತಗುಲಿ, ಗಾಯಗೊಂಡ ಘಟನೆ ಶುಕ್ರವಾರ ನಡೆಯಿತು.

ಧ್ವಜಾರೋಹಣವಾಗುತ್ತಿದ್ದಂತೆ ಕನ್ನಡಪರ ಸಂಘಟನೆಯ ಮುಖಂಡ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಲ್ಲು ಗಿಣ್ಣಿ ಕುಶಾಲತೋಪು(ಗಾಳಿಯಲ್ಲಿ ಗುಂಡು) ಹಾರಿಸಿದ್ದಾರೆ. ಬಳಿಕ ಬಂದೂಕನ್ನು ಕೆಳಗೆ ಇಳಿಸಿ ಇಡುವ ವೇಳೆ ಆಕಸ್ಮಿಕವಾಗಿ ಮತ್ತೊಂದು ಗುಂಡು ಹಾರಿದೆ.

ಈ ವೇಳೆ ಹತ್ತಿರದಲ್ಲೇ ನಿಂತಿದ್ದ ಗ್ರಾಮ ಪಂಚಾಯ್ತಿ ಹಾಲಿ ಅಧ್ಯಕ್ಷೆ ಸೋಮವ್ವ ಹೊಸಮನಿ ಮೋಣಕಾಲಿಗೆ ಗುಂಡು ತಗುಲಿ, ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಅವರನ್ನು ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ಈ ಸಂಬಂಧ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಮಲ್ಲು ಗಿಣ್ಣಿ  ಅವರನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

SCROLL FOR NEXT