ರಾಜ್ಯ

ಯತ್ನಾಳ್ ಸಕ್ಕರೆ ಕಾರ್ಖಾನೆ ಬಂದ್: ಕ್ರಮ ಸಮರ್ಥಿಸಿಕೊಂಡ ಸಚಿವ ಈಶ್ವರ್ ಖಂಡ್ರೆ

Srinivasamurthy VN

ಕಲಬುರಗಿ: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಕ್ಕರೆ ಕಾರ್ಖಾನೆಯನ್ನು ಬಂದ್ ಮಾಡಿಸುವ ಕುರಿತ ಸರ್ಕಾರದ ವಿರುದ್ಧದ ಕ್ರಮವನ್ನು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸಮರ್ಥಿಸಿಕೊಂಡಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಒಡೆತನದ ಕಾರ್ಖಾನೆಯಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಲಕ್ಷಾಂತರ ಟನ್ ಕಬ್ಬು ಅರೆಯುತ್ತಿದ್ದರು. ಹೀಗಾಗಿ ಸಂಬಂಧ ಪಟ್ಟ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ಹೇಳಿದರು. 

ಇದೇ ವೇಳೆ ಪರಿಸರ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ವರ್ಷದ ಹಿಂದೆ 1.5 ಕೋಟಿ ರೂ. ದಂಡ ವಿಧಿಸಿತ್ತು. ಯತ್ನಾಳ್ ದಂಡದ ಮೊತ್ತ ಮರುಪಾವತಿಸಿದ್ದಾರೆ. ಹೀಗಿರುವಾಗ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜಕೀಯ ಕಾರಣಗಳಿಂದಾಗಿ ರಾಜ್ಯ ಸರ್ಕಾರವೇ ಕ್ರಮಕ್ಕೆ ಮುಂದಾಗಿದೆ ಎಂಬ ಆರೋಪಗಳು ಆಧಾರ ರಹಿತವಾಗಿದೆ ಎಂದು ಖಂಡ್ರೆ ಹೇಳಿದರು.

ವಾರದ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿ ಸಭೆ ನಡೆಸಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವರು ತಿಳಿಸಿದ್ದು, ಎಷ್ಟು ಕಾರ್ಖಾನೆಗಳು ಪರಿಸರ ಮಾಲಿನ್ಯ ಕಾಯಿದೆಯನ್ನು ಉಲ್ಲಂಘಿಸಿ ಗಾಳಿ ಮತ್ತು ನೀರನ್ನು ಕಲುಷಿತಗೊಳಿಸಿವೆ ಎಂಬುದನ್ನು ಪತ್ತೆ ಹಚ್ಚಿ, ಉಲ್ಲಂಘಿಸಿದವರ ಮೇಲೆ ಮಂಡಳಿಯು ಯಾವ ಕ್ರಮ ಕೈಗೊಂಡಿದೆ ಎಂಬುದರ ಕುರಿತು ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಸಭೆಯಲ್ಲಿ ಖಂಡ್ರೆ ಹೇಳಿದರು.

ವರದಿ ಆಧರಿಸಿ ಇದೀಗ ಸರ್ಕಾರ ಪರಿಸರ ಮಾಲಿನ್ಯ ಕಾಯಿದೆ ಉಲ್ಲಂಘಿಸಿದ ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳಲು ಆರಂಭಿಸಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
 

SCROLL FOR NEXT