ಮಡಿಕೇರಿ: ದುಬಾರೆ ಆನೆ ಶಿಬಿರವು ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಪ್ರತೀನಿತ್ಯ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಮಳೆಗಾಲದಲ್ಲಿ ನದಿ ನೀರಿನ ಮಟ್ಟ ಹೆಚ್ಚಾಗಿರುವ ಕಾರಣ ಈ ಸಂದರ್ಭದಲ್ಲಿ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾವೇರಿಗೆ ಅಡ್ಡಲಾಗಿ ತೂಗುಸೇತವೆ ನಿರ್ಮಿಸಿ, ಪ್ರವಾಸಿಗರಿಗೆ ಅನುವು ಮಾಡಿಕೊಡುವಂತೆ ಆಗ್ರಹಗಳು ವ್ಯಕ್ತವಾಗುತ್ತಿವೆ.
ದುಬಾರೆ ಆನೆ ಶಿಬಿರವು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ ಹಾಗೂ 15ಕ್ಕೂ ಹೆಚ್ಚು ಪಳಗಿದ ಆನೆಗಳಿರುವ ನೆಲೆಯಾಗಿದೆ. ಶಿಬಿರವು ಕಾವೇರಿ ನದಿಯ ದಡದಲ್ಲಿದ್ದು, ಪ್ರವಾಸಿಗರು ಈ ಸ್ಥಳಕ್ಕೆ ಬರಬೇಕೆಂದರೆ ನದಿ ದಾಟುವುದು ಅನಿವಾರ್ಯವಾಗಿದೆ.
ಆನೆ ಶಿಬಿರಕ್ಕೆ ಭೇಟಿ ನೀಡಲು ಕಾಲ್ನಡಿಗೆಯಲ್ಲಿ ನದಿ ದಾಟಲು ಸಾವಿರಾರು ಪ್ರವಾಸಿಗರು ಸಾಲುಗಟ್ಟಿ ನಿಲ್ಲುತ್ತಾರೆ. ಬೇಸಿಗೆಯಲ್ಲಿ ನದಿ ದಾಟುವುದು ಕಾರ್ಯಸಾಧ್ಯವಾದರೂ ಮಳೆಗಾಲದಲ್ಲಿ ನದಿಯ ನೀರಿನ ಮಟ್ಟ ಹೆಚ್ಚಾಗುವುದರಿಂದ ಅದು ಸಾಧ್ಯವಾಗುವುದಿಲ್ಲ.
ಮಳೆಗಾಲದಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಇಲಾಖೆಯು ದೋಣಿ ಸೌಲಭ್ಯವನ್ನು ಆರಂಭಿಸಿತ್ತು. ಆದರೆ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ದೋಣಿ ಸಿಗದೆ ಹಲವರು ನಿರಾಶೆಗೊಳ್ಳುತ್ತಿದ್ದರು. ಹೀಗಾಗಿ ಮಳೆಗಾಲದಲ್ಲಿ ಶಿಬಿರವನ್ನು ಬಂದ್ ಮಾಡಲಾಗಿತ್ತು.
ತೂಗುಸೇತುವೆಗೆ ಈಗಾಗಲೇ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಅನುಮತಿ ಸಿಕ್ಕಿಲ್ಲ ಎನ್ನಲಾಗಿದೆ.
ಆದರೆ, ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸುವಂತೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಕುಶಾಲನಗರ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
6 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಜ್ಯಕ್ಕೆ ಸಲ್ಲಿಸಲಾಗಿದ್ದು, ಈ ನಿಟ್ಟಿನಲ್ಲಿ ವಿವಿಧ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಶಾಸಕರು ಖಚಿತಪಡಿಸಿದ್ದಾರೆ.