ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ (KMF) ಮೊಟ್ಟ ಮೊದಲ ಬಾರಿಗೆ ಒಂದು ಕೋಟಿ ಲೀಟರ್ ಹಾಲನ್ನು ಸಂಗ್ರಹಿಸಿ ದಾಖಲೆ ನಿರ್ಮಿಸಿದೆ.
ಕೆಎಂಎಫ್ ಸಾಧನೆ ನಿಮಿತ್ತ ಇಂದು ನಡೆದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡು ಗೋಪೂಜೆ ಸಲ್ಲಿಸಿ, ಸಾಧನೆಯ ಹಿಂದಿನ ಶಕ್ತಿಯಾಗಿರುವ ನಾಡಿನ ರೈತಾಪಿ ವರ್ಗಕ್ಕೆ ಧನ್ಯವಾದ ಸಲ್ಲಿಸಿದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ, ''‘ನಂದಿನಿ’ ಬ್ರಾಂಡ್‌ನ ಡೈರಿ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಕರ್ನಾಟಕ ಹಾಲು ಒಕ್ಕೂಟವು (KMF) ರೈತರಿಂದ ದಿನಕ್ಕೆ ಒಂದು ಕೋಟಿ ಲೀಟರ್ ಹಾಲು ಸಂಗ್ರಹಿಸುವ ಮೈಲಿಗಲ್ಲನ್ನು ಸಾಧಿಸಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಕಳೆದ ವರ್ಷ ಮೇ ತಿಂಗಳಲ್ಲಿ ಹಾಲು ಉತ್ಪಾದನೆ ದಿನಕ್ಕೆ 90 ಲಕ್ಷ ಲೀಟರ್ ಆಗಿತ್ತು. ಈಗ ಕೆಎಂಎಫ್‌ಗೆ ದಿನಕ್ಕೆ ಒಂದು ಕೋಟಿ ಲೀಟರ್ ಹಾಲು ಸಿಗುತ್ತಿದೆ. ಕೆಎಂಎಫ್ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.
ಹಲವು ವರ್ಷಗಳ ಹಿಂದೆ ಪಶುಸಂಗೋಪನೆ ಸಚಿವರಾಗಿದ್ದಾಗ ಹೈನುಗಾರಿಕೆ ನಿರ್ವಹಣೆಯನ್ನು ಹಾಲು ಒಕ್ಕೂಟಗಳಿಗೆ ವಹಿಸಿದ್ದರು. ರಾಜ್ಯದಲ್ಲಿ ಈಗ 15 ಹಾಲು ಒಕ್ಕೂಟಗಳು, 15 ತಾಯಿ ಡೈರಿಗಳು ಮತ್ತು 16,000 ಹಾಲು ಬೆಳೆಗಾರರ ಸಂಘಗಳಿವೆ. ಹೆಚ್ಚುತ್ತಿರುವ ಹಾಲಿನ ಸಂಗ್ರಹದಿಂದಾಗಿ ಅರ್ಧ ಮತ್ತು ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್‌ಗಳಲ್ಲಿ ಹಾಲಿನ ಪ್ರಮಾಣವನ್ನು 50 ಎಂಎಲ್ ಹೆಚ್ಚಿಸಲಾಗಿದೆ ಮತ್ತು ಪ್ರಮಾಣಾನುಗುಣವಾಗಿ ಇತ್ತೀಚೆಗೆ ಎರಡು ರೂಪಾಯಿಗಳಷ್ಟು ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.
ಹಾಲಿನ ಉತ್ಪಾದನೆ ಹೆಚ್ಚಾದ ಕಾರಣ ಪ್ಯಾಕೆಟ್‌ಗಳಲ್ಲಿ ಹಾಲಿನ ಪ್ರಮಾಣವನ್ನು ಹೆಚ್ಚಿಸಿದ್ದೇವೆ. ಮೂಲತಃ ರೈತರಾಗಿರುವ ಹಾಲು ಬೆಳೆಗಾರರಿಗೆ ಅವರು ಉತ್ಪಾದಿಸುವ ಹೆಚ್ಚುವರಿ ಹಾಲನ್ನು ಸಂಗ್ರಹಿಸಲು ಸಾಧ್ಯವಿಲ್ಲ ಎಂದು ನಾವು ಹೇಳಲಾಗದ ಕಾರಣ ಈ ರೀತಿ ಮಾಡಲಾಗಿದೆ.
ಆದರೆ ಪ್ರತಿಪಕ್ಷ ಬಿಜೆಪಿಗೆ ಇದು ಅರ್ಥವಾಗದೆ ಕರ್ನಾಟಕ ಸರ್ಕಾರ ಹಾಲಿನ ದರ ಹೆಚ್ಚಿಸಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಬಿಜೆಪಿ ನಾಯಕರು ಈ ವಿಷಯದ ಬಗ್ಗೆ ಸುಳ್ಳುಗಳನ್ನು ಹರಡುತ್ತಿದ್ದಾರೆ. ಏಕೆಂದರೆ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದರು.
ಸರ್ಕಾರ ಹಾಲು ಉತ್ಪಾದಕರಿಗೆ ದಿನಕ್ಕೆ 5 ಕೋಟಿ ರೂ. ಗೌರವಧನ ನೀಡುತ್ತಿದ್ದು, ವಾರ್ಷಿಕ 1,800 ಕೋಟಿ ರೂ ವ್ಯಯವಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.