ರಾಜ್ಯ

ನಂದಿನಿ ಬ್ರ್ಯಾಂಡ್ ದೋಸೆ-ಇಡ್ಲಿ ಹಿಟ್ಟು ಮಾರಾಟಕ್ಕೆ KMF ಯೋಜನೆ!

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇಡ್ಲಿ ಮತ್ತು ದೋಸೆಗೆ ಅಪಾರ ಬೇಡಿಕೆಯನ್ನು ಮನಗಂಡಿರುವ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ಇಡ್ಲಿ ಮತ್ತು ದೋಸೆ ಹಿಟ್ಟು ಉತ್ಪನ್ನ ಮಾರಾಟಕ್ಕೆ ಸಿದ್ಧತೆ ನಡೆಸಿದೆ.

ನಂದಿನಿ ಬ್ರ್ಯಾಂಡ್ ದೋಸೆ-ಇಡ್ಲಿ ಹಿಟ್ಟು ಮಾರಾಟಕ್ಕೆ KMF ಯೋಜನೆ!
ಸಂಗ್ರಹ ಚಿತ್ರ
Published On :

ಬೆಂಗಳೂರು: ಬೆಂಗಳೂರಲ್ಲಿ ಇನ್ನು ಮುಂದೆ ನಂದಿನಿ ಹಾಲಷ್ಟೇ ಅಲ್ಲ, ನಂದಿನಿ ಬ್ರ್ಯಾಂಡ್‌ನ ರೆಡಿ ಟು ಕುಕ್ ದೋಸೆ ಮತ್ತು ಇಡ್ಲಿ ಹಿಟ್ಟು ಕೂಡ ಸಿಗಲಿದೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇಡ್ಲಿ ಮತ್ತು ದೋಸೆಗೆ ಅಪಾರ ಬೇಡಿಕೆಯನ್ನು ಮನಗಂಡಿರುವ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ಇಡ್ಲಿ ಮತ್ತು ದೋಸೆ ಹಿಟ್ಟು ಉತ್ಪನ್ನ ಮಾರಾಟಕ್ಕೆ ಸಿದ್ಧತೆ ನಡೆಸಿದೆ.

ಬೆಂಗಳೂರಿನಲ್ಲಿ ರೆಡಿ ಟು ಕುಕ್‌ ಮಾದರಿ ಹೆಚ್ಚು ಜನಪ್ರಿಯವಾಗುತ್ತಿದ್ದು, ಐಡಿ, ಅಸಲ್‌, ಎಂಟಿಆರ್‌ ಮುಂತಾದ ಕಂಪನಿಗಳ ದೋಸೆ, ಇಡ್ಲಿ ಹಿಟ್ಟುಗಳು ಈಗಾಗಲೇ ಚಾಲ್ತಿಯಲ್ಲಿವೆ. ಇವುಗಳಿಗೆ ಪೈಪೋಟಿ ನೀಡಲು ಕೆಎಂಎಫ್ ನಿರ್ಧರಿಸಿದ್ದು, ಶೀಘ್ರದಲ್ಲೇ ನಂದಿನಿ ಬ್ರಾಂಡ್‌ನ ರೆಡಿ ಟು ಕುಕ್ ದೋಸೆ ಮತ್ತು ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಬೆಂಗಳೂರು ಮಾರುಕಟ್ಟೆಗೆ ದೋಸೆ, ಇಡ್ಲಿ ಹಿಟ್ಟು ಪರಿಚಯಿಸುವ ವಿಚಾರವನ್ನು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಖಾಸಗಿ ಕಂಪನಿಗಳಾದ ಐಡಿ, ಅಸಲ್, ಎಂಟಿಆರ್‌ ಮುಂತಾದ ಕಂಪನಿಗಳ ರೆಡಿ ಟು ಕುಕ್‌ ದೋಸೆ, ಇಡ್ಲಿ ಹಿಟ್ಟುಗಳಿಗೆ ಪೈಪೋಟಿ ನೀಡಲು ನಂದಿನಿಯೂ ಮುಂದಾಗಿದೆ. ಎರಡು ತಿಂಗಳೊಳಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ನಾವು ಈಗಾಗಲೇ ಹಾಲು, ಬ್ರೆಡ್, ಬನ್, ತುಪ್ಪ, ಬೆಣ್ಣೆ, ಮೊಸರು, ಚೀಸ್, ಮಜ್ಜಿಗೆ ಮತ್ತು ಮೊಸರು ಮುಂತಾದ ಉತ್ಪನ್ನಗಳನ್ನು ಹೊಂದಿದ್ದೇವೆ. ಈಗ ಇಡ್ಲಿ ಮತ್ತು ದೋಸೆ ಹಿಟ್ಟಿನ ಉತ್ಪನ್ನವನ್ನು ಪ್ರಾರಂಭಿಸಲು ಬಯಸುತ್ತೇವೆ. ಹೆಚ್ಚಿನ ದುಡಿಯುವ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರಿನಲ್ಲಿ ವಿಶೇಷವಾಗಿ ತ್ವರಿತ ಉಪಹಾರ ಆಯ್ಕೆಗಳನ್ನು ಹುಡುಕುತ್ತಿರುವ ಟೆಕ್ಕಿಗಳನ್ನು ಗಮನದಲ್ಲಿರಿಸಿಕೊಂಡು ಈ ಉತ್ಪನ್ನಗಳು ಪರಿಚಯಿಸಲಾಗುತ್ತಿದೆ.

ಈಗಾಗಲೇ ಮಾರುಕಟ್ಟೆಯಲ್ಲಿರುವ ಕಂಪನಿಗಳ ದೋಸೆ, ಇಡ್ಲಿ ಹಿಟ್ಟಿಗಿಂತ ಭಿನ್ನವಾಗಿ, ರುಚಿಯನ್ನು ಸುಧಾರಿಸಲು ನಂದಿನಿ ದೋಸೆ ಮತ್ತು ಇಡ್ಲಿ ಹಿಟ್ಟಿಗೆ ಹಾಲೊಡಕು ಪ್ರೋಟೀನ್ ಪುಡಿಯನ್ನೂ ಸೇರಿಸಲಾಗುತ್ತಿದೆ. ಇದು ಸ್ವಾದವನ್ನು ಹೆಚ್ಚಿಸುವುದಲ್ಲದೆ, ಪೌಷ್ಟಿಕಾಂಶದಿಂದಲೂ ಕೂಡಿರಲಿದೆ. ಈಗಾಗಲೇ ಪ್ರಯೋಗಗಳನ್ನು ನಡೆಸಿದ್ದೇವೆ ಮತ್ತು ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ ಎಂದು ತಿಳಿಸಿದ್ದಾರೆ.

ಹಿಟ್ಟು ತಯಾರಿಕೆ ಮತ್ತು ಪೂರೈಕೆಗಾಗಿ ಕೆಎಂಎಫ್‌ ಇತ್ತೀಚೆಗೆ ಟೆಂಡರ್ ಕರೆದಿತ್ತು. ಆರಂಭದಲ್ಲಿ ಕೇವಲ ಒಂದು ಬಿಡ್ ಪಡೆದಿದ್ದರೂ, ಜುಲೈ ವೇಳೆಗೆ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ನಿರೀಕ್ಷೆಯಲ್ಲಿ ಕೆಎಂಎಫ್‌ ಮತ್ತೊಮ್ಮೆ ಟೆಂಡರ್ ಕರೆದಿದೆ. ಟೆಂಡರ್‌ಗೆ ಅರ್ಜಿ ಸಲ್ಲಿಸುವ ಸಂಸ್ಥೆ ಬೆಂಗಳೂರು ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸಬೇಕು. ಎಫ್‌ಎಸ್‌ಎಸ್‌ಎಐ ಪರವಾನಗಿ ಹೊಂದಿದ್ದು, ಚಾಲ್ತಿಯಲ್ಲಿರುವ ದರಗಳಲ್ಲಿ ಕೆಎಂಎಫ್‌ನಿಂದ ಹಾಲೊಡಕು ಪ್ರೋಟೀನ್ ಅನ್ನು ಸಂಯೋಜಿಸಬೇಕು ಎಂಬುದು ಬಿಡ್‌ದಾರರಿಗೆ ವಿಧಿಸಲಾಗಿರುವ ಷರತ್ತುಗಳು. ಹಾಲೊಡಕು ಪುಡಿಯನ್ನು ಹೊರತುಪಡಿಸಿ ಎಲ್ಲ ಕಚ್ಚಾ ವಸ್ತುಗಳನ್ನು ಸೋರ್ಸಿಂಗ್ ಮಾಡುವುದು, ಉತ್ಪಾದನೆ ಮತ್ತು ಪ್ಯಾಕೇಜಿಂಗ್‌ನಲ್ಲಿ ಕೆಎಂಎಫ್‌ ಮಾನದಂಡಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿದೆ.

ಟೆಂಡರ್‌ಗೆ ಒಂದೇ ಒಂದು ಸಂಸ್ಥೆ ಪ್ರತಿಕ್ರಿಯಿಸಿದೆ. ಹೀಗಾಗಿ ವರ್ಕ್‌ ಆರ್ಡರ್‌ ನೀಡುವುದು ಸಾಧ್ಯವಾಗಿಲ್ಲ. ಆದ್ದರಿಂದ ಮತ್ತೊಮ್ಮೆ ಟೆಂಡರ್ ಕರೆಯಲಾಗಿದೆ. ಈ ಬಾರಿ ನಾವು ಸಂಸ್ಥೆಗೆ ಟೆಂಡರ್ ನೀಡಲಿದ್ದೇವೆ ಎಂದು ಹೇಳಿದ್ದಾರೆ.

ದೋಸೆ, ಇಡ್ಲಿ ಹಿಟ್ಟು 450 ಗ್ರಾಂ ಮತ್ತು 900 ಗ್ರಾಂ ಪ್ಯಾಕೆಟ್‌ಗಳಲ್ಲಿ ಮಾರುಕಟ್ಟೆಗೆ ಬರಲಿದ್ದು, ವಾರ್ಷಿಕ 109,000 ಕೆಜಿ ಉತ್ಪಾದನೆಯನ್ನು ಗುರಿಯಾಗಿರಿಸಿಕೊಂಡಿದೆ. ದೋಸೆ, ಇಡ್ಲಿ ಹಿಟ್ಟುಗಳ ದರ ಎಷ್ಟು ಎಂಬುದು ಇನ್ನೂ ನಿಗದಿಯಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.