ಸಚಿವ ಮುರುಗೇಶ್ ನಿರಾಣಿ 
ರಾಜ್ಯ

ನೇಮಕಾತಿಯಲ್ಲಿ ಅಕ್ರಮ: ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧದ ತನಿಖೆಗೆ ಅಸ್ತು; ಬಂಧನಕ್ಕೆ ನಿರ್ಬಂಧ ವಿಧಿಸಿದ ಹೈಕೋರ್ಟ್‌

ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಬಹುದು. ಆದರೆ, ತನಿಖೆಗೆ ಸಹಕರಿಸಿದರೆ, ಅರ್ಜಿದಾರರನ್ನು ತನಿಖಾಧಿಕಾರಿಗಳು ಬಂಧಿಸುವಂತಿಲ್ಲ ಎಂದು ನಿರ್ದೇಶಿಸಿ ಪೀಠವು ಮಧ್ಯಂತರ ಆದೇಶ ಮಾಡಿತು.

ಬೆಂಗಳೂರು: ಕೈಗಾರಿಕೆ ಇಲಾಖೆಯ ಮಾರ್ಕೆಟಿಂಗ್‌, ಜಾಹೀರಾತು ಮತ್ತು ಪ್ರಚಾರ ಸಂಸ್ಥೆಯಲ್ಲಿ 2011-15ರಲ್ಲಿ ನಡೆದ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ ಮಾಜಿ ಸಚಿವ ಮುರಗೇಶ್ ನಿರಾಣಿ ವಿರುದ್ಧದ ತನಿಖೆಗೆ ಶುಕ್ರವಾರ ಅನುಮತಿಸಿರುವ ಹೈಕೋರ್ಟ್‌, ನಿರಾಣಿ ಅವರನ್ನು ಬಂಧಿಸದಂತೆ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸರಿಗೆ ನಿರ್ದೇಶಿಸಿದೆ.

ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ನಗರದ ಹೈಗ್ರೌಂಡ್ಸ್ ಠಾಣಾ ಪೊಲೀಸರಿಗೆ ನಿರ್ದೇಶಿಸಿರುವ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಮಾಜಿ ಸಚಿವ ಮುರುಗೇಶ್‌ ನಿರಾಣಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಏಕಸದಸ್ಯ ಪೀಠ ನಡೆಸಿತು.

ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಬಹುದು. ಆದರೆ, ತನಿಖೆಗೆ ಸಹಕರಿಸಿದರೆ, ಅರ್ಜಿದಾರರನ್ನು ತನಿಖಾಧಿಕಾರಿಗಳು ಬಂಧಿಸುವಂತಿಲ್ಲ ಎಂದು ನಿರ್ದೇಶಿಸಿ ಪೀಠವು ಮಧ್ಯಂತರ ಆದೇಶ ಮಾಡಿತು. ಜೊತೆಗೆ, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಪ್ರಕರಣದ ಮೂಲದೂರುದಾರ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಮತ್ತು ಬೆಂಗಳೂರು ಹೈಗ್ರೌಂಡ್ಸ್‌ ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಪರ ವಕೀಲ ಟಿ ಅಜಯ್‌ ಕಡಕೋಳ ಅವರು “2011ರಲ್ಲಿ ಮರುಗೇಶ್‌ ನಿರಾಣಿ ಅವರು ರಾಜ್ಯದ ಬೃಹತ್‌ ಕೈಗಾರಿಕೆ ಸಚಿವರಾಗಿದ್ದರು. ಈ ವೇಳೆ ಕೈಗಾರಿಕೆ ಇಲಾಖೆಯ ಮಾರ್ಕೆಂಟಿಂಗ್‌, ಜಾಹೀರಾತು ಮತ್ತು ಪ್ರಚಾರ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು. ನೇಮಕಾತಿ ಮತ್ತು ಸೇವಾ ಕಾಯಂ ಪ್ರಕ್ರಿಯೆ 2011ರಿಂದ 15ರವರೆಗೆ ನಡೆದಿದೆ. ಸಚಿವರಾಗಿದ್ದ ಮುರುಗೇಶ್‌ ನಿರಾಣಿ ಅವರು ಈ ನೇಮಕಾತಿಗೆ ಅಕ್ರಮವಾಗಿ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿ ಹತ್ತು ವರ್ಷಗಳ ನಂತರ ಖಾಸಗಿ ದೂರುದಾರರು ವಿಚಾರಣಾಧೀನ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದಾರೆ. ಅದನ್ನು ಪರಿಗಣಿಸಿದ ನ್ಯಾಯಾಲಯವು ತನಿಖೆ ನಡೆಸಲು ಹೈಗ್ರೌಂಡ್ಸ್‌ ಪೊಲೀಸರಿಗೆ ನಿರ್ದೇಶಿಸಿದೆ. ಅದರಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆʼ ಎಂದು ವಿವರಿಸಿದರು.

ಮುಂದುವರಿದು, ಪ್ರಕರಣದಲ್ಲಿ ನೇಮಕಾತಿ ನಡೆಸಲು ನಿರಾಣಿ ಅವರು ಅಕ್ರಮವಾಗಿ ಅನುಮತಿ ನೀಡಿಲ್ಲ. ಹೀಗಿದ್ದರೂ ದುರದ್ದೇಶಪೂರ್ವಕವಾಗಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಪ್ರಕರಣದ ಸತ್ಯಾಂಶಗಳನ್ನು ಪರಿಗಣಿಸದೆ ವಿಚಾರಣಾಧೀನ ನ್ಯಾಯಾಲಯವು ತನಿಖೆಗೆ ಆದೇಶಿಸಿದೆ. ಈ ಕ್ರಮವು ಕಾನೂನುಬಾಹಿರವಾಗಿದ್ದು, ಖಾಸಗಿ ದೂರು ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು” ಎಂದು ಕೋರಿದರು.

ಸರ್ಕಾರದ ಪರವಾಗಿ ಹೆಚ್ಚುವರಿ ಸರ್ಕಾರಿ ಅಭಿಯೋಜಕರಾದ ಬಿ ಎನ್‌ ಜಗದೀಶ್‌ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT