ಬೆಂಗಳೂರು: 16ನೇ ವಿಧಾನಸಭೆಯ 4ನೇ ಮುಂಗಾರು ಅಧಿವೇಶನ ಜುಲೈ 15 ರಿಂದ ಜುಲೈ 26 ರವರೆಗೆ ನಡೆಯಲಿದೆ. ಒಟ್ಟು 9 ದಿನಗಳ ಕಾಲ ಅಧಿವೇಶನ ನಡೆಯಲಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಎಪ್ಪತ್ತು ವರ್ಷಗಳ ನಂತರ ವಿಧಾನಸಭೆ ಪ್ರವೇಶದ್ವಾರದ ಬಳಿ ಸ್ವಲ್ಪ ಬದಲಾವಣೆ ಮಾಡಿದ್ದೇವೆ. ಕಬ್ಬಿಣದ ಗ್ರಿಲ್ ರೀತಿ ಇತ್ತು. ವಿಶಿಷ್ಠ ರೀತಿಯಲ್ಲಿ ಬದಲಾವಣೆ ಮಾಡಲಾಗಿದೆ. ಜುಲೈ 15 ರಂದು ಬೆಳಗ್ಗೆ 10.30 ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರವೇಶದ್ವಾರವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು ಸ್ಪೀಕರ್ ಯು.ಟಿ ಖಾದರ್ ತಿಳಿಸಿದರು. ಸೋಮವಾರದಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಮುಂಬರುವ ಮುಂಗಾರು ಅಧಿವೇಶನದ ಕುರಿತು ವಿವರ ನೀಡಲು ವಿಧಾನಸಭಾಧ್ಯಕ್ಷ ಖಾದರ್ ಮತ್ತು ಪರಿಷತ್ ಸಭಾಪತಿ ಹೊರಟ್ಟಿ ಶುಕ್ರವಾರ ಸುದ್ದಿಗೋಷ್ಠಿ ಕರೆದಿದ್ದ ವೇಳೆ ಈ ಭಿನ್ನಮತ ಕಂಡು ಬಂದಿದೆ.
ವಿಧಾನಸೌಧ ಸೌಂದರ್ಯೀಕರಣ ವಿಚಾರದಲ್ಲಿ ಸ್ಪೀಕರ್ ಖಾದರ್ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಭಿನ್ನಧ್ವನಿ ಪ್ರಕಟಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮೊದಲು ಖಾದರ್ ಮಾತನಾಡಿ, 70 ವರ್ಷದ ಬಳಿಕ ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ದ್ವಾರವನ್ನು ಬದಲಾವಣೆ ಮಾಡಲಾಗುತ್ತಿದೆ. ಇಲ್ಲಿ ಮೊದಲು ಕಬ್ಬಿಣದ ಗ್ರಿಲ್ ಇತ್ತು. ದೇಶ-ವಿದೇಶದ ಗಣ್ಯರು ಭೇಟಿ ನೀಡಲು ಬಂದಾಗ ಇದು ಸೊಗಸಾಗಿ ಕಾಣುತ್ತಿರಲಿಲ್ಲ. ಹೀಗಾಗಿ ದ್ವಾರವನ್ನು ಸುಂದರವಾಗಿ ರೂಪಿಸಲಾಗಿದ್ದು ಜುಲೈ 15ರಂದು 10.30ಕ್ಕೆ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಭವಿಷ್ಯದಲ್ಲಿ ಸಂಪೂರ್ಣ ವಿಧಾನಸೌಧವನ್ನು ಪರಂಪರೆಗೆ ಧಕ್ಕೆಯಾಗದಂತೆ ಸೌಂದರ್ಯೀಕರಿಸಲಾಗುವುದು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೊರಟ್ಟಿ, ಪರೋಕ್ಷವಾಗಿ ವಿರೋಧಿಸಿದರು. ವಿಧಾನಸೌಧದ ಕೊಠಡಿಗಳ ಮೂಲೆಯನ್ನು ಬದಲಾಯಿಸಬಾರದು ಎಂಬ ನಿಯಮವೇ ಇದೆ. ಈ ಹಿಂದೆ ಸಚಿವರೊಬ್ಬರು ಗೋಡೆ ಒಡೆದು ವಿವಾದಕ್ಕೆ ಕಾರಣವಾಗಿದ್ದರು. ಸಣ್ಣಪುಟ್ಟ ಬದಲಾವಣೆ ಬೇಕಾದರೆ ಮಾಡಿಕೊಳ್ಳಬಹುದು. ಆದರೆ ಸಂಪೂರ್ಣವಾಗಿ ಗೋಡೆ ಒಡೆಯುವುದಕ್ಕೆ ಅವಕಾಶವೇ ಇಲ್ಲ. ಇತಿಹಾಸವನ್ನು ಸ್ವಲ್ಪ ಓದಿದರೆ ಗೊತ್ತಾಗುತ್ತದೆ, ವಿಧಾನಸೌಧದಲ್ಲಿ ವಾಸ್ತು ಪ್ರಕಾರ ನವೀಕರಣ ಮಾಡುವ ಅಗತ್ಯವೇ ಇಲ್ಲ. ಏಕೆಂದರೆ ಇಡೀ ವಿಧಾನಸೌಧ ವಾಸ್ತು ಪ್ರಕಾರ ನಿರ್ಮಾಣಗೊಂಡಿದೆ ಎಂದರು.
ಅಧಿವೇಶನ ಸಮಯಕ್ಕೆ ಸರಿಯಾಗಿ ಹಾಜರಾಗುವ ಶಾಸಕರಿಗೆ ಟೀ ಕಪ್ ನೀಡಲಾಗುವುದು. ಕಳೆದ ಬಾರಿ ನೀಡಿದ ಅವಕಾಶ ಈ ಬಾರಿಯೂ ನೀಡುತ್ತೇವೆ. ಇಡೀ ದಿನ ಇರುವ ಸದಸ್ಯರುಗಳಿಗೆ ವಿಶೇಷ ಅವಕಾಶ ನೀಡಲಾಗುತ್ತದೆ. ಹೊಸ ತಂತ್ರಜ್ಞಾನ ಮೂಲಕ ಶಾಸಕರು ಎಷ್ಟುತ್ತಿಗೆ ಬರುತ್ತಾರೆ, ಹೋಗುತ್ತಾರೆ ಎಂದು ತಿಳಿದುಕೊಳ್ಳಲಾಗುವುದು. ಒಬ್ಬ ಸದಸ್ಯ ಅಧಿವೇಶನದ ಒಳಗೆ ಎಷ್ಟೊತ್ತು ಕುಳಿತಿದ್ದಾರೆ ಎಂಬ ಮಾಹಿತಿ ಪಡೆದುಕೊಳ್ಳುತ್ತೇವೆ ಎಂದರು. ಕ್ರೀಡೆಗೆ ಪ್ರೋತ್ಸಾಹ ನೀಡಲು ಶಾಸಕರು, ವಿಧಾನಮಂಡಲದ ಸಿಬ್ಬಂದಿಗೆ ಕಪ್ ಇಡಲಾಗಿದೆ. ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ನಲ್ಲಿ ಜು.20 ರಂದು ಚೆಸ್ ಸ್ಪರ್ಧೆ ಏರ್ಪಡಿಸಲಾಗಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ನ ಸದಸ್ಯರು ಭಾಗಿಯಾಗಬಹುದು. ಗೆದ್ದವರಿಗೆ ಬಹುಮಾನ ನೀಡುತ್ತೇವೆ. ಕಲಾಪ ವೀಕ್ಷಣೆಗೆ ಬರುವ ಮಕ್ಕಳು, ವಿದ್ಯಾರ್ಥಿಗಳಿಗೆ ಎಂದಿನಂತೆ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.
ಈ ವೇಳೆ, ಶಾಸಕ ಬಿ.ನಾಗೇಂದ್ರ ಅವರನ್ನು ವಶಕ್ಕೆ ಪಡೆದ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್, ಇಡಿ ಅವರು ನಮಗೆ ಮಾಹಿತಿ ನೀಡಿಲ್ಲ. ಅಧಿವೇಶನದ ಒಳಗೆ ಇದ್ದರೆ ನಮ್ಮ ಅನುಮತಿ ಪಡೆಯಬೇಕು. ಹೊರಗಿದ್ದರೆ ಒಬ್ಬ ಶಾಸಕರನ್ನು ವಶಕ್ಕೆ ತೆಗೆದುಕೊಳ್ಳುವಾಗ ಸ್ಪೀಕರ್ ಅವರಿಗೆ ಮಾಹಿತಿ ನೀಡಬೇಕಾಗುತ್ತದೆ. ಆದರೆ ಆ ಬಗ್ಗೆ ಮಾಹಿತಿ ಬಂದಿಲ್ಲ ಎಂದು ಹೇಳಿದರು.