ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದೆ. ಮೊದಲ ದಿನವೇ ಸರ್ಕಾರಕ್ಕೆ ಬಿಜೆಪಿಯ ಪ್ರತಿಭಟನೆಯ ಬಿಸಿ ತಟ್ಟಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಖಂಡಿಸಿ, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯ ಎಲ್ಲಾ ಶಾಸಕರು, ಶಾಸಕರ ಭವನದಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ಇಂದು ಧರಣಿ ನಡೆಸಿದರು. ಈ ಹಗರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡುವವರೆಗೂ ಈ ಹೋರಾಟ ನಿಲ್ಲದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಇತ್ತ ಪರಿಷತ್ ನಲ್ಲಿ ಕಲಾಪ ಆರಂಭಗೊಂಡು ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಕದ ಬಳಿಕ ಬಿಜೆಪಿ ಸದಸ್ಯರು ಹಗರಣದ ಚರ್ಚೆಗೆ ಪಟ್ಟು ಹಿಡಿದರು. ಇಷ್ಟೆಲ್ಲಾ ಪ್ರಹಸನಗಳ ನಡುವೆ, ಕಳೆದ 2-3 ದಿನಗಳಿಂದ ನಾಪತ್ತೆಯಾಗಿದ್ದ ವಾಲ್ಮೀಕಿ ನಿಗಮ ಅಧ್ಯಕ್ಷ ಶಾಸಕ ಬಸನಗೌಡ ದದ್ದಲ್ ವಿಧಾನಸಭಾ ಕಲಾಪಕ್ಕೆ ಹಾಜರಾಗಿದ್ದರು. ಆಮಧ್ಯೆ, ವಿಧಾನ ಪರಿಷತ್ ನ ಸಭಾ ನಾಯಕನಾಗಿ ಸಣ್ಣ ನೀರಾವರಿ ಸಚಿವ ಎನ್ಎಸ್ ಭೋಸರಾಜ್ ಅವರು 2 ನೇ ಅವಧಿಗೆ ಆಯ್ಕೆಯಾಗಿದ್ದರೆ, ಹೆಚ್ ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವುಗೊಂಡಿದ್ದ ಜೆಡಿಎಸ್ ನ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಚಿಕ್ಕನಾಯಕನಹಳ್ಳಿ ಜೆಡಿಎಸ್ ಶಾಸಕ ಸಿಬಿ ಸುರೇಶ್ ಬಾಬು ನೇಮಕಗೊಂಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಪರ್ಯಾಯ ನಿವೇಶನ ಹಂಚಿಕೆ ಹಗರಣದ ಕುರಿತು ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗ ಹಗರಣದ ತನಿಖೆ ನಡೆಸಲಿದೆ. 6 ತಿಂಗಳೊಳಗೆ ವರದಿ ನೀಡುವಂತೆ ವಿಚಾರಣಾ ಆಯೋಗಕ್ಕೆ ಸೂಚನೆ ನೀಡಲಾಗಿದೆ. ಮುಡಾ ಸೈಟ್ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಆರೋಪ ಕೇಳಿ ಬಂದಿದ್ದು, ಪ್ರತಿಪಕ್ಷಗಳು ಸಿಎಂ ರಾಜೀನಾಮೆಗೆ ಪಟ್ಟು ಹಿಡಿದು ತೀವ್ರ ಹೋರಾಟ ನಡೆಸುತ್ತಿವೆ.
ಪೆಟ್ರೋಲ್, ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್ ಟಿಕೆಟ್ ದರ ಏರಿಕೆಯಾಗುತ್ತದೆ ಎಂಬ ವದಂತಿಗಳಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದು, ಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆಯಿಲ್ಲ ಎಂದು ಹೇಳಿದ್ದಾರೆ. ಮುಂಗಾರು ಅಧಿವೇಶನ ಆರಂಭಕ್ಕೆ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಮಲಿಂಗಾರೆಡ್ದಿ, ರಾಜು ಕಾಗೆ ದರ ಏರಿಕೆ ಬಗ್ಗೆ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಸದ್ಯ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ತಿಳಿಸಿದರು.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಸಿಬಿಐ ಎಫ್‌ಐಆರ್ ರದ್ದು ಕೋರಿ ಡಿ ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಬೇಲಾ ಎಂ ತ್ರಿವೇದಿ ಮತ್ತು ಎಸ್ ಸಿ ಶರ್ಮಾ ಅವರಿದ್ದ ನ್ಯಾಯಪೀಠ ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ. ಅಕ್ಟೋಬರ್ 19, 2023ರಲ್ಲಿ ಹೈಕೋರ್ಟ್ FIR ರದ್ದತಿ ಮನವಿಯನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿರುವ ಕಾರಣ ಜಿಲ್ಲೆಯ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆಗಳಿಗೆ, ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಾಳೆಯಿಂದ 18 ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಇಂದು ಮಧ್ಯಾಹ್ನ ಹಲವೆಡೆ ಮಳೆಯಾಗಿದೆ.
ಕಾಪಿರೈಟ್ ಉಲ್ಲಂಘನೆ ಆರೋಪದಡಿ ನಟ ರಕ್ಷಿತ್ಶೆಟ್ಟಿ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎರಡು ಚಿತ್ರದ ಹಾಡುಗಳನ್ನು ಅನುಮತಿ ಇಲ್ಲದೆ ಬಳಕೆ ಆರೋಪ ರಕ್ಷಿತ್ ಶೆಟ್ಟಿ ವಿರುದ್ಧ ಕೇಳಿಬಂದಿದೆ. ಎಂಆರ್ಟಿ ಮ್ಯೂಸಿಕ್ನ ಪಾಲುದಾರಿಕೆ ಹೊಂದಿರುವ ನವೀನ್ ಕುಮಾರ್, ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ‘ನ್ಯಾಯ ಎಲ್ಲಿದೆ..’ ಹಾಗೂ ‘ಗಾಳಿಮಾತು..’ ಚಿತ್ರದ ಹಾಡುಗಳನ್ನು ರಕ್ಷಿತ್ ಶೆಟ್ಟಿ, ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.