ಬೆಂಗಳೂರು: ಹುಬ್ಬಳ್ಳಿಯ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣವನ್ನು ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ, ಆಕೆಯ ಕುಟುಂಬಕ್ಕೆ ಪರಿಹಾರ ಒದಗಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸಂತ್ರಸ್ತೆ ಕುಟುಂಬಕ್ಕೆ ಪರಿಹಾರ ವಿಳಂಬ ಕುರಿತು ವಿಧಾನಪರಿಷತ್ತಿನಲ್ಲಿಂದು ಸದಸ್ಯ ತಿಪ್ಪಣ್ಣ ಕಾಮಕನೂರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ತ್ವರಿತಗತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣವನ್ನು ಸರ್ಕಾರಿ ವಿಶೇಷ ಪ್ರಕರಣವೆಂದು ಪರಿಗಣಿಸಲಿದ್ದು, ಆಕೆಯ ಕುಟುಂಬಕ್ಕೆ ಪರಿಹಾರ ಒದಗಿಸಲಾಗುವುದು, ಈ ಸಂಬಂಧ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ, ಕುಟುಂಬಕ್ಕೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಾಮಾನ್ಯವಾಗಿ ಹತ್ಯೆ ಪ್ರಕರಣಗಳಲ್ಲಿ ಸರ್ಕಾರಿ ಪರಿಹಾರ ನೀಡಲ್ಲ. ಆದರೆ, ಸಂತ್ರಸ್ತೆ ಕುಟುಂಬದ ತೀವ್ರ ಬಡತನವನ್ನು ಪರಿಗಣಿಸಿ, ಇದನ್ನು ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಿದೆ. ತಾನು ಕೂಡಾ ಅಂಜಲಿ ನಿವಾಸಕ್ಕೆ ತೆರಳಿ, ಆಕೆಯ ಅಜ್ಜಿಯೊಂದಿಗೆ ಮಾತನಾಡಿದ್ದು, ಅವರ ಜೀವನ ಪರಿಸ್ಥಿತಿಯನ್ನು ನೋಡಿದ್ದು, ನೆರವು ನೀಡುವ ಭರವಸೆ ನೀಡಿದ್ದೇನೆ. ಕೊಳಚೆ ಮಂಡಳಿ ಅಥವಾ ಆಶ್ರಯ ಯೋಜನೆಯಡಿ ಸರ್ಕಾರದಿಂದ ಮನೆ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಂತ್ರಸ್ತೆ ಕುಟುಂಬಕ್ಕೆ ಆಶ್ರಯ ಯೋಜನೆಯಡಿ ಮನೆ ಒದಗಿಸಲು ಒಪ್ಪಿಕೊಂಡಿದ್ದಾರೆ. ಪ್ರಕರಣದ ವಿಚಾರಣೆ ಪ್ರಸ್ತುತ ಚಾರ್ಜ್ ಶೀಟ್ ಸಲ್ಲಿಕೆ ಹಂತದಲ್ಲಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಎಲ್ಲಾ ಸಾಕ್ಷ್ಯಧಾರ ಸಂಗ್ರಹಿಸಲಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆರೋಪಿ ಆಕೆಯ ಕುಟುಂಬದ ಎದುರೇ ಚಾಕು ಇರಿದು ಹತ್ಯೆ ಮಾಡಿದ್ದ. ಆರೋಪಿಯಿಂದ ಜೀವ ಬೆದರಿಕೆ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು ಎಂದು ಅಂಜಲಿ ಕುಟುಂಬ ಹೇಳುತ್ತಿದ್ದಂತೆ ಈ ಘಟನೆ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿತ್ತು.