ಬೆಂಗಳೂರು/ತಿರುವನಂತಪುರಂ: ಉತ್ತರ ಕನ್ನಡ ಜಿಲ್ಲೆಯ ಶಿರೂರು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ ಭಾರೀ ಭೂಕುಸಿತದಿಂದ ನಾಪತ್ತೆಯಾಗಿರುವ ಕೇರಳದ ಲಾರಿ ಚಾಲಕ ಸೇರಿದಂತೆ ಮೂವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಇಂದು ಮತ್ತೊಬ್ಬ ಮೃತದೇಹ ಪತ್ತೆಯಾಗಿದ್ದು, ಜುಲೈ 16ರಂದು ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಇದುವರೆಗೆ ಏಳು ಮೃತದೇಹಗಳನ್ನು ಗುರುತಿಸಲಾಗಿದೆ. ಕೇರಳದ ಚಾಲಕ ಸೇರಿದಂತೆ ಇನ್ನೂ ಮೂವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನಮ್ಮ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಉಪ ಆಯುಕ್ತೆ ಲಕ್ಷ್ಮಿ ಪ್ರಿಯಾ ಕೆ ತಿಳಿಸಿದ್ದಾರೆ.
ಕೇರಳದ ಕೋಝಿಕ್ಕೋಡ್‌ನ ಲಾರಿ ಚಾಲಕ ಅರ್ಜುನ್ ಎಂದು ತಿಳಿದುಬಂದಿದ್ದು ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು ಈ ಮಧ್ಯೆ ರಸ್ತೆ ಪುನಃಸ್ಥಾಪನೆ ಕಾರ್ಯವು ನಡೆಯುತ್ತಿದೆ. ಇಂದು ಪತ್ತೆಯಾಗಿರುವ ಮೃತದೇಹ ತಮಿಳುನಾಡಿನ ಚಾಲಕನದ್ದಾಗಿರಬಹುದು ಎಂದು ಲಕ್ಷ್ಮಿ ಪ್ರಿಯಾ ಹೇಳಿದ್ದಾರೆ. ನಾವು ದೇಹದ ಕೆಳಗಿನ ಭಾಗವನ್ನು ಮಾತ್ರ ಪಡೆದುಕೊಂಡಿದ್ದೇವೆ. ಹಾಗಾಗಿ ಅದು ಯಾರ ದೇಹ ಎಂದು ಗುರುತಿಸಲು ಸಾಧ್ಯವಾಗುತ್ತಿಲ್ಲ. ಇದು ಪುರುಷ ದೇಹ. ಹಾಗಾಗಿ, ಅದು ತಮಿಳುನಾಡಿನ ಚಾಲಕನದ್ದಾಗಿರಬಹುದು ಎಂದು ಅವರು ಹೇಳಿದರು.
ಮೃತದೇಹದ ಡಿಎನ್‌ಎ ಪರೀಕ್ಷೆಯನ್ನು ನಡೆಸುತ್ತಿದ್ದು, ಟ್ಯಾಂಕರ್ ಚಾಲಕನ ಕುಟುಂಬಕ್ಕೆ ಸ್ಯಾಂಪಲ್ ನೀಡಲು ತಮಿಳುನಾಡಿನಿಂದ ಬರುವಂತೆ ಮನವಿ ಮಾಡಿದ್ದು, ಅದು ಹೊಂದಾಣಿಕೆಯಾದರೆ ಮೃತದೇಹವನ್ನು ಅವರಿಗೆ ಹಸ್ತಾಂತರಿಸುತ್ತೇವೆ ಎಂದು ಲಕ್ಷ್ಮಿ ಪ್ರಿಯಾ ಹೇಳಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ (ಕಾರವಾರ), ನಾರಾಯಣ ಎಂ ಅವರು, ಪೊಲೀಸರು ಅವಶೇಷಗಳನ್ನು ತೆಗೆದುಹಾಕಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಬಳಸುತ್ತಿದ್ದರು. ಆದರೆ ನಿರಂತರ ಮಳೆ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಆದರೆ ಮೃತರ ದೇಹಗಳನ್ನು ಪತ್ತೆ ಮಾಡದೇ ಬಿಡುವುದಿಲ್ಲ ಎಂದು ಹೇಳಿದರು.
ಅರ್ಜುನ್ ಕುಟುಂಬದ ಪ್ರಕಾರ, ಲಾರಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ. ಅವರ ಫೋನ್ ಎರಡು ಬಾರಿ ರಿಂಗ್ ಆಗಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ಅಳವಡಿಸಲಾಗಿರುವ ವಾಹನವನ್ನು ಬೆಟ್ಟದ ಭಾಗಗಳು ಕುಸಿದ ಪ್ರದೇಶಕ್ಕೆ ಟ್ರ್ಯಾಕ್ ಮಾಡಲಾಗಿದೆ ಎಂದು ಅವರು ಹೇಳಿದರು.