ಅಂಕೋಲಾ: ಅಂಕೋಲಾದ ಶಿರೂರಿನಲ್ಲಿ ಉಂಟಾದ ಗುಡ್ಡ ಕುಸಿತದಲ್ಲಿ ಅವಶೇಷಗಳಡಿ ಸಿಲುಕಿರುವ ಮೃತದೇಹಗಳನ್ನು ಪತ್ತೆ ಮಾಡುವುದಕ್ಕಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಭಾರತೀಯ ಕರಾವಳಿ ರಕ್ಷಣಾ ಪಡೆಯ ನೆರವು ಕೋರಿದೆ.
ಗುಡ್ಡ ಕುಸಿತದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚಾರಣೆ ಮುಂದುವರೆದಿದ್ದು, ಹೆಚ್ಚಿನ ಪ್ರಮಾಣದ ಪ್ರಗತಿಯಾಗಿಲ್ಲ. 5 ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಕಠಿಣ ಭೂಪ್ರದೇಶ ಮತ್ತು ಭಾರೀ ಮಳೆಯು ರಕ್ಷಣಾ ತಂಡಕ್ಕೆ ಪ್ರಮುಖ ಅಡಚಣೆಗಳನ್ನೊಡ್ಡಿದೆ.
ಭಾರೀ ಮಳೆಯ ನಡುವೆಯೇ ರಾಷ್ಟ್ರೀಯ ಹೆದ್ದಾರಿ 66 ಅನ್ನು ತೆರವುಗೊಳಿಸುವ ಮತ್ತು ಕಾಣೆಯಾದವರ ಹುಡುಕಾಟದ ಕೆಲಸ ಮುಂದುವರೆದಿದೆ. ದುರ್ಗಮ ಪ್ರದೇಶ, ಪ್ರತಿಕೂಲ ಹವಾಮಾನ, ಗಂಗವಳ್ಳಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಹೆಚ್ಚಿನ ಭೂಕುಸಿತದ ಸಾಧ್ಯತೆಯನ್ನು ಪರಿಗಣಿಸಿ, ಜಿಲ್ಲಾಡಳಿತವು ಭಾರತೀಯ ಕಡಲ ರಕ್ಷಣಾ ಪಡೆ ಸಹಾಯ ಕೋರಿ ಶುಕ್ರವಾರ ಪತ್ರ ಬರೆದಿದೆ.
ಈ ಪ್ರದೇಶಗಳಿಗೆ ನಾವು ತಲುಪಲು ಸಾಧ್ಯವಾಗುತ್ತಿಲ್ಲವಾದ ಕಾರಣ ನದಿಯಲ್ಲಿ ಮತ್ತು ಮಣ್ಣು ಸಂಗ್ರಹವಾಗಿರುವ ಸ್ಥಳಗಳಲ್ಲಿ ಶವಗಳನ್ನು ಹುಡುಕಲು ಭಾರತೀಯ ಕೋಸ್ಟ್ ಗಾರ್ಡ್‌ಗೆ ಪತ್ರ ಬರೆದಿದ್ದೇನೆ" ಎಂದು ಉತ್ತರ ಕನ್ನಡದ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಆದಾಗ್ಯೂ, ಪ್ರತಿಕೂಲ ಹವಾಮಾನ ಹೆಲಿಕಾಪ್ಟರ್‌ಗಳ ಬಳಕೆಯನ್ನು ಕಷ್ಟಸಾಧ್ಯವಾಗಿಸಿವೆ.
“ಈ ಹೆಲಿಕಾಪ್ಟರ್‌ಗಳು ಗೋವಾದಿಂದ ಬರಬೇಕಿತ್ತು, ಆದರೆ ಭಾರೀ ಮಳೆಯಿಂದಾಗಿ ಅವು ಟೇಕಾಫ್ ಆಗಲಿಲ್ಲ. ನಾಳೆ ಅನುಕೂಲಕರವಾದ ಹವಾಮಾನವನ್ನು ನಾವು ನಿರೀಕ್ಷಿಸುತ್ತಿದ್ದೇವೆ ಇದರಿಂದ ಹೆಲಿಕಾಪ್ಟರ್‌ಗಳು ಆಗಮಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.