ಬೆಂಗಳೂರು: ಐಟಿ,ಐಟಿಇಎಸ್, ಬಿಪಿಒ ವಲಯದ ಉದ್ಯೋಗಿಗಳ ಕೆಲಸದ ಅವಧಿಯನ್ನು ವಿಸ್ತರಿಸುವ ಪ್ರಸ್ತಾವನೆ ಐಟಿ ಉದ್ಯಮದಿಂದ ಬಂದಿದ್ದು, ಕ್ಷೇತ್ರದ ನಾಯಕರು ಮತ್ತು ಉದ್ಯೋಗಿಗಳು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಅಭಿಪ್ರಾಯ ಸಂಗ್ರಹಿಸಿದ ನಂತರ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೋಮವಾರ ಹೇಳಿದ್ದಾರೆ.
ಐಟಿ ಉದ್ಯೋಗಿಗಳ ಒಕ್ಕೂಟ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದು, ಉದ್ಯಮದ ಅನುಭವಿಗಳು ಮತ್ತು ನಾಯಕರು ಸಹ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸಿದರು. ಪ್ರಸ್ತಾವಿತ 'ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ 2024, ಕೆಲಸದ ದಿನವನ್ನು 14 ಗಂಟೆಗಳಿಗೆ ಸಾಮಾನ್ಯಗೊಳಿಸಲು ಪ್ರಯತ್ನಿಸುತ್ತದೆ. ಅಸ್ತಿತ್ವದಲ್ಲಿರುವ ಕಾಯಿದೆಯು ಓವರ್‌ಟೈಮ್ (ಧೀರ್ಘಾವಧಿ) ಸೇರಿದಂತೆ ದಿನಕ್ಕೆ ಗರಿಷ್ಠ 10 ಗಂಟೆಗಳ ಕೆಲಸವನ್ನು ಮಾತ್ರ ಅನುಮತಿಸುತ್ತದೆ.
'ಉದ್ದೇಶಿತ ಮಸೂದೆಯನ್ನು ತಾವೇ ತಂದಿಲ್ಲ. ಉದ್ಯಮ ಒತ್ತಡ ಹೇರುತ್ತಿದೆ. ಬೇಕು ಅಂತಾ ಅವರು ಕೇಳುತ್ತಿದ್ದಾರೆ. ಉದ್ಯಮದ ಒತ್ತಡದಿಂದ ಮಸೂದೆ ರೂಪಿಸಲಾಗಿದೆ. ನಾವು ಇನ್ನೂ ಪರಿಶೀಲನೆ ಮಾಡುತ್ತಿದ್ದೇವೆ. ಉದ್ಯಮದ ಎಲ್ಲಾ ಮುಖ್ಯಸ್ಥರು ಈ ವಿಚಾರ ಕುರಿತು ಚರ್ಚಿಸಬೇಕಾಗಿದೆ ಎಂದು ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ವಿಚಾರ ಕುರಿತು ಚರ್ಚಿಸಲು ಜನರು ಮುಕ್ತರಾಗಿದ್ದಾರೆ. ಉದ್ಯಮದ ನಾಯಕರು ಪ್ರತಿ ವಿಷಯಕ್ಕೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹೀಗಾಗಿ ಉದ್ಯಮದ ಎಲ್ಲಾ ನಾಯಕರು ಚರ್ಚೆ ನಡೆಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ಬಯಸುತ್ತೇನೆ. ಐಟಿ ಉದ್ಯೋಗಿಗಳಿಂದ ಭಿನ್ನಾಭಿಪ್ರಾಯವಿದೆ. ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ಬಯಸುತ್ತೇನೆ ಅದರ ಆಧಾರದ ಮೇಲೆ ನಾವು ಏನು ಮಾಡಬೇಕೆಂದು ಪರಿಶೀಲಿಸುತ್ತೇವೆ ಎಂದರು. ಈ ಮಧ್ಯೆ ಕೆಲಸದ ಸಮಯವನ್ನು ವಿಸ್ತರಿಸುವ ಯೋಜನೆಯನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (ಕೆಐಟಿಯು) ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಒತ್ತಾಯಿಸಿದೆ.
ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ ಮಾತನಾಡಿ, ಉದ್ದೇಶಿತ ಮಸೂದೆಯಂತೆ ನೌಕರರು ವಾರದಲ್ಲಿ 80-85 ಗಂಟೆಗಳ ಕಾಲ ಕೆಲಸ ಮಾಡಬೇಕಾಗಬಹುದು. "ಇದನ್ನು ಯಾವುದೇ ಸಂದರ್ಭದಲ್ಲೂ ಒಪ್ಪಿಕೊಳ್ಳಲಾಗುವುದಿಲ್ಲ. ಎಲ್ಲಾ ಐಟಿ, ಐಟಿಇಎಸ್ ಉದ್ಯೋಗಿಗಳು ಮತ್ತು ಅವರ ಅವಲಂಬಿತರು ಅಥವಾ ಕುಟುಂಬದ ಸದಸ್ಯರು ಹೊರಗೆ ಬಂದು ಇದನ್ನು ವಿರೋಧಿಸಲು ಕರೆ ನೀಡುತ್ತೇವೆ ಎಂದಿದ್ದಾರೆ.
ಈ ವಿಷಯದ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತಮ್ಮನ್ನು ಅಪಹಾಸ್ಯ ಮಾಡಿಕೊಂಡಿದೆ. ‘ಸಿದ್ದರಾಮಯ್ಯ ಸರ್ಕಾರವೇ ನಿದ್ರಾವಸ್ಥೆಯಲ್ಲಿರುವಾಗ, ಐಟಿ ಕ್ಷೇತ್ರವನ್ನು ದಿನಕ್ಕೆ 14 ಕೆಲಸದ ಗಂಟೆಗಳು, ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವಂತೆ ಒತ್ತಾಯಿಸುವ ಮಸೂದೆಯನ್ನು ಪ್ರಸ್ತಾಪಿಸಲುಯೋಜಿಸಿದೆ’ ಎಂದು ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.