ಕಾರವಾರ: ಜುಲೈ 19 ರಂದು ಕಾರವಾರ ಕರಾವಳಿಯಲ್ಲಿ ಸಮುದ್ರದ ಮಧ್ಯದಲ್ಲಿ ಕಂಟೇನರ್ ಸಾಗಿಸುತ್ತಿದ್ದ ಹಡಗಿನಲ್ಲಿ ಕಾಣಿಸಿಕೊಂಡಿದ್ದ ಭಾರಿ ಬೆಂಕಿಯನ್ನು ನಂದಿಸಲಾಗಿದೆ ಎಂದು ಕರಾವಳಿ ಕಾವಲು ಪಡೆ ಮಂಗಳವಾರ ತಿಳಿಸಿದೆ.
"ಈ ನೌಕೆಯು ಪ್ರಸ್ತುತ ನವಮಂಗಳೂರಿನ ಪಶ್ಚಿಮಕ್ಕೆ 13 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದೆ ಮತ್ತು ತೆರೆದ ಸಮುದ್ರದ ಕಡೆಗೆ ಸಾಗುತ್ತಿದೆ" ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ(ಐಸಿಜಿ) ಪ್ರಕಟಣೆಯಲ್ಲಿ ತಿಳಿಸಿದೆ.
MV ಮಾರ್ಸ್ಕ್ ಫ್ರಾಂಕ್ ಫರ್ಟ್ ಹೆಸರಿನ ಕಂಟೈನರ್ ಸಾಗಿಸುವ ಹಡಗು ಜು. 2ರಂದು ಮಲೇಷಿಯಾದಿಂದ ಹೊರಟಿತ್ತು. ಜು. 21ಕ್ಕೆ ಶ್ರೀಲಂಕಾ ತಲುಪಬೇಕಿತ್ತು. ಆದರೆ, ಜುಲೈ 19 ರಂದು ಕಾರವಾರ ತೀರದ ಸಮುದ್ರ ಮಧ್ಯ ಇದ್ದಕ್ಕಿದ್ದಂತೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಮತ್ತು ಬೆಂಕಿ ಹಲವು ಕಂಟೇನರ್ಗಳಿಗೆ ಆವರಿಸಿತ್ತು.
ಈ ಅಗ್ನಿ ಅವಘಡದಲ್ಲಿ ಒಬ್ಬ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
"ಮೊದಲ ಪ್ರತಿಸ್ಪಂದಕರಾಗಿ ICG ಹಡಗುಗಳ ನಿರಂತರ ಪ್ರಯತ್ನಗಳ ಪರಿಣಾಮ, ದೊಡ್ಡ ಬೆಂಕಿಯನ್ನು ನಂದಿಸಲಾಗಿದೆ ಮತ್ತು ಕಂಟೇನರ್‌ಗಳ ಒಳಗಿನ ವಸ್ತುಗಳಿಂದಾಗಿ ಪುನರಾವರ್ತಿತ ಸಣ್ಣ ಬೆಂಕಿಯೊಂದಿಗೆ ಬಿಳಿ ಹೊಗೆ ಗೋಚರಿಸುತ್ತದೆ" ಎಂದು ಕಡಲ ಭದ್ರತಾ ಸಂಸ್ಥೆ ಹೇಳಿದೆ.