ಸಿಎಂ ಸಿದ್ದರಾಮಯ್ಯ 
ರಾಜ್ಯ

KRS​​ ಜಲಾಶಯಕ್ಕೆ ಬಾಗಿನ ಅರ್ಪಿಸಲು ಸಿಎಂ ಮುಂದು: ಕಪ್ಪು ಬಾವುಟ ಪ್ರದರ್ಶಿಸಲು ಕಬ್ಬು ಬೆಳೆಗಾರರ ನಿರ್ಧಾರ

ಅಹೋರಾತ್ರಿ ಧರಣಿ ನಡೆಸಿದ್ದ ರೈತರಿಗೆ ನೀಡಿದ್ದ ಭರವಸೆಯಂತೆ ನಡೆದುಕೊಳ್ಳದ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ತೀರ್ಮಾನಿಸಲಾಯಿತು.

ಮೈಸೂರು: ಹಳೇ ಮೈಸೂರು ಭಾಗದ ಕೆಆರ್​ಎಸ್​ ಹಾಗೂ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಈ ನಡುವಲ್ಲೇ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಪ್ಪು ಬಾವುಟ ಪ್ರದರ್ಶಿಸಿ, ಪ್ರತಿಭಟನೆ ನಡೆಸಲು ಕಬ್ಬು ಬೆಳೆಗಾರರು ನಿರ್ಧರಿಸಿದ್ದಾರೆ.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಗುರುವಾರ ನಡೆದ ತುರ್ತು ಸಭೆಯಲ್ಲಿ ಪ್ರತಿಭಟನೆಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳಲಾಯಿತು.

ಅಹೋರಾತ್ರಿ ಧರಣಿ ನಡೆಸಿದ್ದ ರೈತರಿಗೆ ನೀಡಿದ್ದ ಭರವಸೆಯಂತೆ ನಡೆದುಕೊಳ್ಳದ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಭಾಗ್ಯರಾಜ್‌, ‘ಪ್ರಸಕ್ತ ಸಾಲಿಗೆ ಟನ್‌ ಕಬ್ಬಿಗೆ ರೂ.4 ಸಾವಿರ ಮುಂಗಡವನ್ನು ಸಕ್ಕರೆ ಕಾರ್ಖಾನೆಗಳಿಂದ ಕೊಡಿಸಬೇಕು. ಸರ್ಕಾರದ ಆದೇಶದಂತೆ ಕಳೆದ ಸಾಲಿನ ಲಾಭಾಂಶ ಟನ್‌ಗೆ ರೂ.150 ಬಾಕಿ ಕೊಡಿಸಬೇಕು. ಸಕ್ಕರೆ ಕಾರ್ಖಾನೆಗಳ ಮುಖ್ಯ ದ್ವಾರದಲ್ಲಿ ಎಪಿಎಂಸಿಯಿಂದಲೇ ತೂಕದ ಯಂತ್ರ ಅಳವಡಿಸಬೇಕು. ಅಂತರ ಜಿಲ್ಲಾ ಕಬ್ಬು ಸಾಗಣೆಗೆ ನಿರ್ಬಂಧ ಹೇರಬಾರದು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರವು ಎಫ್‌ಆರ್‌ಪಿಯನ್ನು (ನ್ಯಾಯಸಮ್ಮತ ಹಾಗೂ ಮೌಲ್ಯಾಧಾರಿತ ದರ) ರೂ.3,400 ನಿಗದಿಪಡಿಸಿರುವುದು ರೈತರಿಗೆ ಮಾಡಿದ ದ್ರೋಹವಾಗಿದ್ದು, ಕೂಡಲೇ ಇದನ್ನು ಮರುಪರಿಶೀಲಿಸಬೇಕು. ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯ ಲಾಭಾಂಶ ಮತ್ತು ಖರ್ಚಿನ ಬ್ಯಾಲೆನ್ಸ್ ಶೀಟ್‌ ಬಗ್ಗೆ ತನಿಖೆ ನಡೆಸಿ ರೈತರಿಗೆ ನ್ಯಾಯ ಕೊಡಿಸಬೇಕು. ಕಬ್ಬು ಕಟಾವು ಹಾಗೂ ಸಾಗಣೆ ಕೂಲಿಯನ್ನು ಮನಬಂದಂತೆ ನಿಗದಿಪಡಿಸಿ ರೈತರನ್ನು ಕಾರ್ಖಾನೆಗಳು ಸುಲಿಗೆ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಹಾಗೂ ಕೆರೆ– ಕಟ್ಟೆಗಳಿಗೆ ಕಳೆದ ವರ್ಷ ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯದಿಂದ ನೀರು ಹರಿಸದೇ ತಮಿಳುನಾಡಿಗೆ ಕೊಟ್ಟು ವಂಚಿಸಲಾಯಿತು. ಈ ಬಾರಿ ಅದಕ್ಕೆ ಅವಕಾಶ ಕೊಡಬಾರದು. ಷರತ್ತು ವಿಧಿಸದೇ ನಾಲೆಗಳಿಗೆ ನೀರು ಹರಿಸಿ ಕೃಷಿ ಚಟುವಟಿಕೆಗಳಿಗೆ ಸಹಕರಿಸಬೇಕು ಎಂದರು.

ನಾಲೆಗಳ ಸಮೀಪದಲ್ಲಿ ಕೊಳವೆಬಾವಿ ಕೊರೆಯಬಾರದು ಮತ್ತು ನಾಲೆಯಿಂದ ಮೋಟಾರ್‌ಗಳ ಮೂಲಕ ನೀರೆತ್ತಬಾರದು ಎಂಬ ನಿಯಮ ರೈತರಿಗೆ ಮಾರಕವಾಗಿದೆ. ರೈತರ ಜಮೀನನ್ನು ವಶಪಡಿಸಿಕೊಂಡು ನಾಲೆಗಳನ್ನು ನಿರ್ಮಿಸಲಾಗಿದೆ. ಹೀಗಿರುವಾಗ, ಕೃಷಿಗೆ ನೀರು ಬಳಸಲು ಮುಂದಾಗುವವರ ವಿರುದ್ಧ ಕ್ರಮ ಜರುಗಿಸಲು ಮುಂದಾದರೆ ಕಾನೂನು ಭಂಗ ಚಳವಳಿ ನಡೆಸಬೇಕಾಗುತ್ತದೆ. ಆದ್ದರಿಂದ ಈ ನಿಯಮವನ್ನು ಜಲಸಂಪನ್ಮೂಲ ಸಚಿವರು ಪುನರ್‌ ಪರಿಶೀಲಿಸಬೇಕು. ಹೊಸ ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ-ಸಕ್ರಮ ಯೋಜನೆ ಮರು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 16ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆಸಿದ್ದೆವು. ಆಗ, ನಮ್ಮನ್ನು ಭೇಟಿಯಾಗಿದ್ದ ಜಿಲ್ಲಾಧಿಕಾರಿ ಜುಲೈ 27ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸುತ್ತೇವೆ ಎಂದು ಹೇಳಿದ್ದರು. ಆದರೆ, ಈ ಬಗ್ಗೆ ಈವರೆಗೂ ಮಾಹಿತಿ ನೀಡಿಲ್ಲ. ಹೀಗಾಗಿ, ಮುಖ್ಯಮಂತ್ರಿಗೆ ಮುತ್ತಿಗೆ ಹಾಕಿ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಾಗುವುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು ಎಟಿಎಂ ವ್ಯಾನ್ ದರೋಡೆ: '5.76 ಕೋಟಿ ಹಣ ಸೀಜ್, ತನಿಖೆಗೆ 11 ತಂಡ ರಚನೆ': ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್

G20 Summit: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆಗೆ ಪ್ರಧಾನಿ ಮೋದಿಯ ಆತ್ಮೀಯತೆ! Video ವೈರಲ್

ಬೆಂಗಳೂರು ಎಟಿಎಂ ವ್ಯಾನ್ ದರೋಡೆ: ಮತ್ತೋರ್ವ ಪ್ರಮುಖ ಆರೋಪಿ Xavier ತಮಿಳುನಾಡಿನಲ್ಲಿ ಬಂಧನ!

'ಅಲ್ಲಾಹ್ ಕಿ ತರಫ್ ಸೇ ಗಿರ್ ಗಯಾ': ತೇಜಸ್ ಯುದ್ಧವಿಮಾನ ಪತನವಾಗುತ್ತಲೇ ನಗುತ್ತಾ ಪಾಕ್ ಪತ್ರಕರ್ತರ ವಿಕೃತಿ! Video

ಜಿ-ಫೋರ್ಸ್ ಬ್ಲಾಕೌಟ್ ನಿಂದ ಪತನ ಸಾಧ್ಯತೆ: ತೇಜಸ್ ಅಪಘಾತ ಬಗ್ಗೆ ತಜ್ಞರು; ಮಗನ ಸಾವಿನ ಸುದ್ದಿ Youtube ನೋಡಿ ತಿಳಿದುಕೊಂಡ ಪೈಲಟ್ ತಂದೆ !

SCROLL FOR NEXT