ಒಲಿಂಪಿಕ್ಸ್ 2024ರ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಬಂದಿದ್ದು ಭಾರತದ ಶೂಟರ್ ಮನು ಭಾಕರ್ ಕಂಚಿನ ಪಡೆದಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಮನು ಭಾಕರ್ 221.7 ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸುವ ಮೂಲಕ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದಾರೆ. ದಕ್ಷಿಣ ಕೊರಿಯಾದ ವೈಜೆ ಓ 243.2 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರೆ, ದಕ್ಷಿಣ ಕೊರಿಯಾದ ವೈಜೆ ಕಿಮ್ 241.3 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದಿದ್ದಾರೆ. ಒಲಿಂಪಿಕ್ಸ್ ನಲ್ಲಿ ಮೊದಲ ಪದಕ ಗೆದ್ದ ಭಾರತೀಯ ಮಹಿಳೆ ಎಂಬ ಖ್ಯಾತಿಗೂ ಮನು ಭಾಕರ್ ಭಾಜನರಾಗಿದ್ದಾರೆ. ಇನ್ನು ಭಾರತದ ಷಟ್ಲರ್ ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್ ನ ಗುಂಪು ಹಂತದ ಮೊದಲ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಫಾತಿಮತ್ ಅಬ್ದುಲ್ ರಜಾಕ್ ವಿರುದ್ಧ ನೇರ ಗೇಮ್‌ಗಳ ಗೆಲುವಿನೊಂದಿಗೆ ತಮ್ಮ ಒಲಿಂಪಿಕ್ಸ್ ಅಭಿಯಾನವನ್ನು ಆರಂಭಿಸಿದ್ದರೆ, ಹಾಕಿ ಗ್ರೂಪ್ ಸ್ಟೇಜ್ ನಲ್ಲಿ ಭಾರತ ಬಲ ನ್ಯೂಜಿಲೆಂಡ್ ವಿರುದ್ಧ 3-2 ಅಂತರದ ಗೆಲುವು ಪಡೆದಿದೆ.
ರಾಜ್ಯ ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಅವರನ್ನು ಮೇಘಾಲಯದ ನೂತನ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಪ್ರಕಟಿಸಿದ್ದಾರೆ. ಮೈಸೂರಿನಿಂದ ಎರಡು ಬಾರಿ ಸಂಸದರಾಗಿದ್ದ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳನ್ನು ಪ್ರತಿನಿಧಿಸಿದ್ದರು. 2017ರಲ್ಲಿ ಬಿಜೆಪಿ ತೊರೆದಿದ್ದ ವಿಜಯಶಂಕರ್ ಕಾಂಗ್ರೆಸ್ ಸೇರ್ಪಡೆಯಾಗಿ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮೈಸೂರಿನಿಂದ ಸ್ಪರ್ಧಿಸಿದ್ದರು. ನವೆಂಬರ್ 2019ರಲ್ಲಿ ಬಿಜೆಪಿ ಮರಳಿದ್ದ ಅವರು. 2023 ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
ರಾಜ್ಯಾದ್ಯಂತ ಭಾರಿ ಮಳೆಗೆ ಹಲವೆಡೆ ಭೂ ಕುಸಿತ ಉಂಟಾಗಿದ್ದು, ಬೆಂಗಳೂರು-ಮಂಗಳೂರು ರೈಲು ಮಾರ್ಗದ ಹಾಸನ ಜಿಲ್ಲೆ ಎಡಕುಮೇರಿ-ಕಡಗರವಳ್ಳಿ ನಡುವಿನ ದೋಣಿಗಲ್ ನಲ್ಲಿ ಭೂಕುಸಿತ ಉಂಟಾಗಿ ರೈಲು ಹಳಿಯ ಮೇಲೆ ಮಣ್ಣು ಬಿದ್ದಿದೆ. ಪರಿಣಾಮ ಕೆಲ ರೈಲುಗಳ ಸಂಚಾರವನ್ನು ಜುಲೈ 29ರವರೆಗೆ ರದ್ದು ಮಾಡಲಾಗಿದೆ. ಬೆಂಗಳೂರು-ಕಣ್ಣೂರು, ಬೆಂಗಳೂರು-ಕಾರವಾರ ಕೆಎಸ್‌ಆರ್ ಎಕ್ಸ್‌ಪ್ರೆಸ್, ಕಣ್ಣೂರು-ಬೆಂಗಳೂರು, ಕಾರವಾರ-ಕೆಎಸ್ ಆರ್ ಬೆಂಗಳೂರು ಎಕ್ಸ್‌ಪ್ರೆಸ್, ಬೆಂಗಳೂರು-ಮುರುಡೇಶ್ವರ, ಮುರ್ಡೇಶ್ವರ- ಬೆಂಗಳೂರು, .ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್, ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್, ಮಂಗಳೂರು ಸೆಂಟ್ರಲ್ -ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ರದ್ದುಗೊಂಡಿದೆ.
ಕೇಂದ್ರ ಸರ್ಕಾರದ ಬಜೆಟ್ನಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂಬ ಕಾಂಗ್ರೆಸ್ ನಾಯಕರ ವಿರುದ್ಧ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ತೀವ್ರ ಅಸಮಾಧಾನ ವ್ಯಕಪಡಿಸಿದ್ದಾರೆ. ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುತ್ತಿದೆ. ಯುಪಿಎ ಸರ್ಕಾರ ಇದ್ದಾಗ ರಾಜ್ಯಕ್ಕೆ 81,791 ಕೋಟಿ ರೂ. ನೀಡಿತ್ತು. ಆದರೆ, 2014ರಿಂದ ಇಲ್ಲಿಯವರೆಗೆ ಎನ್ಡಿಎ ಸರ್ಕಾರ 2,95,818 ಕೋಟಿ ರೂಪಾಯಿ ನೀಡಿದೆ. ಕಳೆದ 10 ವರ್ಷದಲ್ಲಿ 2,36,955 ಕೋಟಿ ತೆರಿಗೆ ಹಂಚಿಕೆಯಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ ಇಂದು ನಂಜನಗೂಡಿನ ಪ್ರವಾಸಿ ಮಂದಿರಕ್ಕೆ ತೆರಳಿದಾಗ ಪ್ರವಾಸಿ ಮಂದಿರದ ಬೀಗ ಹಾಕಿದ್ದ ಘಟನೆ ವರದಿಯಾಗಿದೆ. ಪ್ರವಾಸಿ ಮಂದಿರದ ಹೊರ ಭಾಗ ಕಾರಿನಲ್ಲೇ ಕುಳಿತ ಎಚ್ಡಿಕೆ 10 ನಿಮಿಷ ಕಾದರೂ ಯಾವೊಬ್ಬ ಸಿಬ್ಬಂದಿ ಬರದೇ ಕರ್ತವ್ಯ ಲೋಪ ಎಸಗಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಭೇಟಿ ವಿಚಾರವನ್ನು ಅಧಿಕಾರಿಗಳಿಗೆ ಮೊದಲೇ ತಿಳಿಸಲಾಗಿತ್ತು ಆದರೂ ಸಿಬ್ಬಂದಿ ಕರ್ತವ್ಯ ಲೋಪ ಎಸಗಿದ್ದಾರೆ.
ರಾಜ್ಯ ಸರ್ಕಾರದ ಹಗರಣಗಳ ವಿರುದ್ಧ ಪಾದಯಾತ್ರೆ, ಹೋರಾಟ ನಡೆಸುವ ಬಗ್ಗೆ ಇಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಭೆ ನಡೆಸಿ ಚರ್ಚೆ ಮಾಡಿದ್ದಾರೆ. ಆಗಸ್ಟ್ 3ರಿಂದ ಬೆಂಗಳೂರಿನಿಂದ ಪಾದಯಾತ್ರೆ ಆರಂಭಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಹೇಳಿದ್ದಾರೆ. ಮೈಸೂರಿನಲ್ಲಿ ಆ.10ರಂದು ಪಾದಯಾತ್ರೆ ಸಮಾರೋಪ ಸಮಾರಂಭ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.ಮೈತ್ರಿ ನಾಯಕರ ಸಭೆ ಬಳಿಕ ಸುದ್ದಿಗೋಷ್ಠಿಯ ವೇಳೆ ಎಚ್ಡಿ ಕುಮಾರಸ್ವಾಮಿ ಮೂಗಿನಲ್ಲಿ ದಿಢೀರ್ ರಕ್ತಸ್ರಾವವಾಗಿದ್ದು, ಕೂಡಲೇ ಕುಮಾರಸ್ವಾಮಿ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ತಪಾಸಣೆಗೆ ಒಳಪಡಿಸಿದ್ದಾರೆ.