ಉತ್ತರ ಕನ್ನಡ: ಅಂಕೋಲಾದ ಶಿರೂರು ಭೂಕುಸಿತ ಪ್ರಕರಣದಲ್ಲಿ (Shirur landslide) ನಾಪತ್ತೆಯಾದವರಿಗಾಗಿ ನಡೆಯುತ್ತಿದ್ದ ಶೋಧ ಕಾರ್ಯಾಚರಣೆಯನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಹೌದು.. ಶಿರೂರು ಭೂಕುಸಿತ ಪ್ರಕರಣದಲ್ಲಿ (Shirur landslide) ನಾಪತ್ತೆಯಾದವರಿಗಾಗಿ ನಡೆಯುತ್ತಿದ್ದ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಪ್ರತಿಕೂಲ ವಾತಾವರಣ ಮತ್ತು ಭಾರಿ ಮಳೆಯ ಮುನ್ಸೂಚನೆ ಹಿನ್ನಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ.ಕೆ ಮಾಹಿತಿ ನೀಡಿದ್ದು, ನಿನ್ನೆ ಮೂರು ಹಾಗೂ ಇವತ್ತು ಒಂದು ಪಾಯಿಂಟ್‌ನಲ್ಲಿ ಹುಡುಕಾಟ ಮಾಡಲಾಗಿದೆ. ಆದರೆ ಎಲ್ಲೂ ಲಾರಿ ಸಿಕ್ಕಿಲ್ಲ, ಕಣ್ಮರೆಯಾಗಿರುವರೂ ಪತ್ತೆಯಾಗಿಲ್ಲ. ಕಾರ್ಯಾಚರಣೆ ವೇಳೆ ಕಲ್ಲು, ಮರದ ತುಂಡುಗಳು ಅಡ್ಡಿಯಾಗಿದ್ದಾಗಿ ಮುಳುಗು ತಜ್ಞರು ತಿಳಿಸಿದ್ದಾರೆ. ನೀರಿನ ಹರಿವು ಸಹ ಹೆಚ್ಚಾಗಿರುವುದರಿಂದ ಶೋಧ ಕಾರ್ಯ ನಡೆಸಲಾಗಿಲ್ಲ.
ಪ್ರತಿಕೂಲ ವಾತಾವರಣ ಮತ್ತು ಭಾರಿ ಮಳೆಯ ಮುನ್ಸೂಚನೆ ಹಿನ್ನಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.
ಅಂತೆಯೇ ಮುಂದಿನ ಕಾರ್ಯಾಚರಣೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಅವರು ಮಾಹಿತಿ ನೀಡಿದರು.
ಮೂವರ ಶವಕ್ಕಾಗಿ ನಡೆಯುತ್ತಿದ್ದ ಶೋಧ ಕಾರ್ಯ
ಶಿರೂರು ಭೂಕುಸಿತ ಪ್ರಕರಣದಲ್ಲಿ (Shirur landslide) ನಾಪತ್ತೆಯಾದ 11 ಮಂದಿ ಪೈಕಿ 8 ಮಂದಿ ಮೃತದೇಹ ಸಿಕ್ಕಿದ್ದವು. ಆದರೆ, ಉಳಿದ ಮೂವರ ಶವಗಳು, 13ನೇ ದಿನದ ಕಾರ್ಯಾಚರಣೆಯಲ್ಲೂ ಸಿಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದಲ್ಲಿ ಭಾನುವಾರ ಹುಡುಕಾಟ ನಡೆಸಲಾಗಿದೆ. ಆದರೂ ಮೂವರ ಮೃತದೇಹ ಪತ್ತೆಯಾಗಿಲ್ಲ. ನಾಪತ್ತೆಯಾಗಿದ್ದ ಜಗನ್ನಾಥ ನಾಯ್ಕ, ಲೋಕೇಶ, ಅರ್ಜುನ್ ಸೇರಿ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು.
ಹಲವರು ಮಣ್ಣಿನಡಿ ಸಿಲುಕಿದ್ದರು, ಇನ್ನೂ ಕೆಲವರು ಗಂಗಾವಳಿ ನದಿಗೆ ಬಿದ್ದ ಹಿನ್ನೆಲೆಯಲ್ಲಿ ನದಿಯಲ್ಲೂ ಹುಡುಕಾಟ ನಡೆಸಲಾಗುತ್ತಿದೆ. ನೀರಿನ ವೇಗ ಹೆಚ್ಚಿರುವುದು ಹಾಗೂ ನದಿಯಲ್ಲಿರುವ ಮಣ್ಣು, ಕಲ್ಲು ಬಂಡೆ ಹಾಗೂ ಮರದ ದಿಮ್ಮಿಗಳಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಅಲ್ಲದೇ ಕಾರ್ಯಾಚರಣೆಯಲ್ಲಿ ಲಾರಿಯನ್ನು ಮೇಲಕ್ಕೆ ಎತ್ತಲೂ ಸಾಧ್ಯವಾಗಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.