ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರಿ ಮಳೆಗೆ ಭೂಕುಸಿತ ಸಂಭವಿಸಿದ್ದು, 96 ಮಂದಿ ಮೃತಪಟ್ಟಿದ್ದು, ಕನಿಷ್ಠ 400ಕ್ಕೂ ಹೆಚ್ಚು ಕುಟುಂಬಗಳು ದುರಂತದಲ್ಲಿ ಸಿಲುಕಿವೆ ಭೂಕುಸಿತ ಪ್ರದೇಶಗಳಲ್ಲಿ ವಿಪತ್ತು ಪರಿಹಾರ ಕಾರ್ಯ ಪ್ರಗತಿಯಲ್ಲಿದೆ. NDRF, ಅಗ್ನಿಶಾಮಕ ದಳ, ಪೊಲೀಸ್ ಮತ್ತು ಅರಣ್ಯ, ಕಂದಾಯ ಮತ್ತು ಸ್ಥಳೀಯ ಸ್ವ-ಸರ್ಕಾರ ಇಲಾಖೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಜೀವಹಾನಿಗೆ ಸಂತಾಪ ಸೂಚಿಸಿದ್ದು, ಕೇರಳಕ್ಕೆ ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲಿಯೂ ನೆರವು ಒದಗಿಸಲಿದೆ ಎಂದು ಭರವಸೆ ನೀಡಿದ್ದಾರೆ. ಕೇರಳದ ಪರಿಸ್ಥಿತಿಯ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೇರಳಕ್ಕೆ ಅಗತ್ಯವಿರುವ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳನ್ನು ಗುರುತಿಸಿ ಅವರನ್ನು ಬಂಧನ ಕೇಂದ್ರಗಳಿಗೆ ಕಳುಹಿಸಲಾಗುವುದು ಇಲ್ಲವೆ ಗಡಿಪಾರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ಹೇಳಿದ್ದಾರೆ. ಬಾಂಗ್ಲಾದೇಶಿ ಪ್ರಜೆಗಳ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಬೆನ್ನಲ್ಲೆ ಗೃಹ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಬಾಂಗ್ಲಾದೇಶಿ ಪ್ರಜೆಗಳು ರಾಜಕೀಯ ಬೆಂಬಲವನ್ನು ಹೊಂದಿರುವುದರಿಂದ ಅವರನ್ನು ಗಡೀಪಾರು ಮಾಡಲು ಸಾಧ್ಯವಾಗಿಲ್ಲ ಎಂಬ ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ, ಬಿಜೆಪಿ ನಾಯಕ ಬಿ. ಭಾಸ್ಕರ್ ರಾವ್ ಹೇಳಿಕೆಗೆ ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ಆಯುಕ್ತರಾಗಿದ್ದ ಅವಧಿಯಲ್ಲಿ ಅವರಿಂದ ಸಾಧ್ಯವಾಗಿರದಿದ್ದ ಕಾರ್ಯವನ್ನು ಈಗ ನಾವು ಮಾಡುತ್ತಿದ್ದೇವೆ ಎಂದು ಪರಮೇಶ್ವರ ಹೇಳಿದ್ದಾರೆ.
ಕಳೆದ 2 ವರ್ಷಗಳಿಂದ ಭಾರೀ ವಾಹನಗಳಿಗೆ ನಿಷೇಧವಿದ್ದ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ ಎಲ್ಲಾ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ರಾಜ್ಯದ ಸುಮಾರು 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಮೇಲ್ಸೇತುವೆಯ ತಾಂತ್ರಿಕ ಸಮಸ್ಯೆಗಳಿಂದ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. ಈಗ ವಾರದಲ್ಲಿ 6 ದಿನ ಮಾತ್ರ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಮೇಲ್ಸೇತುವೆ ಎಡ, ಬಲ ಪಕ್ಕದಲ್ಲಿ ಗರಿಷ್ಠ 40 ಕಿ.ಮೀ ವೇಗದಲ್ಲಿ ಚಲಿಸುವಂತೆ ಹೆದ್ದಾರಿ ಅಧಿಕಾರಿಗಳು ಸೂಚಿಸಿದ್ದು, ಒಂದು ವೇಳೆ ನಿಯಮ ಮೀರಿದರೆ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಮತ್ತೊಂದು ಪದಕವನ್ನು ತನ್ನದಾಗಿಸಿಕೊಂಡಿದೆ. 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಮತ್ತು ಮನು ಭಾಕರ್ ಜೋಡಿ ಕಂಚಿನ ಪದಕ ಪಡೆದಿದೆ. ಮಹಿಳೆಯರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದ ಮನು ಭಾಕರ್, 2ನೇ ಪದಕ ಗೆಲ್ಲುವ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ 2 ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ದೂರುಗಳು ಬಂದ ಹಿನ್ನೆಲೆಯಲ್ಲಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ್ ಹಾಗೂ ಉಪ ಲೋಕಾಯುಕ್ತ ನ್ಯಾ.ಫಣೀಂದ್ರ ಮತ್ತು ನ್ಯಾ.ವೀರಪ್ಪ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಆಸ್ಪತ್ರೆಯ ಅವ್ಯವಸ್ಥೆಯ ಅನಾವರಣಗೊಂಡಿದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ದೊರಕುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆವು. ಜೀವ ಉಳಿಸುವ ತುರ್ತು ಔಷಧಗಳಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಔಷಧ ವಿತರಿಸುವ ಗುತ್ತಿಗೆದಾರರಿಗೆ ಹಣ ಬಾಕಿ ಇರುವುದರಿಂದ ಔಷಧ ಸರಬರಾಜಿಗೆ ತಡೆಯಾಗಿದೆ ಎಂದು ಸಿಬ್ಬಂದಿಗಳು ಹೇಳಿದ್ದಾರೆ, ಹಲವು ನ್ಯೂನತೆಗಳು ಕಂಡು ಬಂದಿದ್ದು, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳು ತಿಳಿಸಿದರು.
ರಾಮಮಂದಿರದ ವಿಗ್ರಹ, ಇಂಡಿಯಾ ಗೇಟ್ ಬಳಿ ಇರುವ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಸೇರಿ ಹಲವು ಪ್ರತಿಮೆಗಳನ್ನು ಕೆತ್ತನೆ ಮಾಡಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಮಥುರಾ ಸಂಸ್ಕೃತಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ. ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪದವಿ ಪ್ರದಾನ ಮಾಡಿದರು.