ಬೆಂಗಳೂರು: ನಗರದಲ್ಲಿ ದುಬಾರಿ ಬೆಲೆಯ ದ್ವಿಚಕ್ರ ವಾಹನಗಳನ್ನು ಕದ್ದು, ತಮಿಳುನಾಡು ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧನಕ್ಕೊಳಪಡಿಸಿದ್ದು, ರೂ.45 ಲಕ್ಷ ಮೌಲ್ಯದ 31 ದ್ವಿಚಕ್ರ ವಾಹನಗಳು ಮತ್ತು 10 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಅಮೃತನಗರದ ರವಿಚಂದ್ರ (21) ಅಲಿಯಾಸ್ ಕುಂಟ, ಮೋಹನ್ ಕುಮಾರ್ (29) ಅಲಿಯಾಸ್ ಬುಲೆಟ್, ನಾಗನಾಥಪುರದ ಗೋವಿಂದರಾಜು (19) ಅಲಿಯಾಸ್ ಶಿವ ಮತ್ತು ಗೋವಿಂದ ಶೆಟ್ಟಿ ಪಾಳ್ಯದ ಅಮೃತ್ ಕುಮಾರ್ (26) ಎಂದು ಗುರ್ತಿಸಲಾಗಿದೆ. ನಾಲ್ಕು ಆರೋಪಿಗಳು ಮಿಳುನಾಡಿನ ಹೊಸೂರು ಮೂಲದವರಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೋಹನ್ ಕುಮಾರ್ ಹೊಸೂರು ಪೊಲೀಸ್ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಅಮೃತ್ ಕುಮಾರ್ ವಿರುದ್ಧ ಹೊಸೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 21 ರಂದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇವರು ನೀಡಿದ ಮಾಹಿತಿಯ ಆಧಾರದ ಮೇಲೆ ಶುಕ್ರವಾರ ಮತ್ತಿಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ.
ನಗರದಲ್ಲಿ ದುಬಾರಿ ಬೆಲೆಯ ಬೈಕ್‌ಗಳು ಮತ್ತು ಸ್ಕೂಟರ್‌ಗಳನ್ನು ಕದಿಯುತ್ತಿದ್ದ ಆರೋಪಿಗಳು ನಂತರ ಅವುಗಳನ್ನು ತಮಿಳುನಾಡು ರಾಜ್ಯದ ಗ್ರಾಮಗಳಲ್ಲಿ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.