ರಾಜ್ಯ

ಭವಾನಿ ರೇವಣ್ಣಗೆ ಜಾಮೀನು, SIT ವಿಚಾರಣೆಗೆ ಹಾಜರು; ಚಂದನ್-ನಿವೇದಿತ ವಿಚ್ಛೇದನ? ರಾಹುಲ್ ಗಾಂಧಿಗೆ ಜಾಮೀನು! ಇಂದಿನ ಸುದ್ದಿ ಮುಖ್ಯಾಂಶಗಳು 07-06-24

ಭವಾನಿ ರೇವಣ್ಣಗೆ ಮಧ್ಯಂತರ ಜಾಮೀನು; SIT ವಿಚಾರಣೆಗೆ ಹಾಜರು

ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣದ ಅಪಹರಣ ಪ್ರಕರಣ ಸಂಬಂಧ ಶಾಸಕ ಹೆಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಅಲ್ಲದೆ, ಎಸ್ಐಟಿ ತನಿಖೆಗೆ ಹಾಜರಾಗುವಂತೆ ಹಾಗೂ ಕೆಆರ್ ನಗರ ಮತ್ತು ಇಡೀ ಹಾಸನ ಜಿಲ್ಲೆಯ ವ್ಯಾಪ್ತಿಯೊಳಗೆ ಪ್ರವೇಶ ಮಾಡದಂತೆ ಷರತ್ತು ವಿಧಿಸಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ಪೀಠ ಇಂದು ಮಧ್ಯಾಹ್ನ 1 ಗಂಟೆಯೊಳಗೆ ಎಸ್‌ಐಟಿಯ ತನಿಖಾಧಿಕಾರಿ ಮುಂದೆ ಹಾಜರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಭವಾನಿ ರೇವಣ್ಣಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ರೇವಣ್ಣ ಎಸ್ಐಟಿ ಅಧಿಕಾರಗಳ ಮುಂದೆ ಹಾಜರಾಗಿದ್ದಾರೆ. ಬಂಧನ ಭೀತಿ ಎದುರಿಸುತ್ತಿದ್ದ ಭವಾನಿ ರೇವಣ್ಣ SIT ವಿಚಾರಣೆಗೆ ಹಾಜರಾಗದೆ ಕಳೆದ 15-20 ದಿನಗಳಿಂದ ತಲೆಮರೆಸಿಕೊಂಡಿದ್ದರು. ಈಮಧ್ಯೆ, ಮೈಸೂರು ಜಿಲ್ಲೆ ಕೆಆರ್ ನಗರದ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಕಾರು ಚಾಲಕ ಅಜಿತ್ನನ್ನೂ SIT ಅಧಿಕಾರಿಗಳು ಬಂಧಿಸಿದ್ದಾರೆ. ಬುಧವಾರ ರಾತ್ರಿಯೇ ಚಿಕ್ಕಮಗಳೂರಿನಲ್ಲಿ ಅಜಿತ್ನನ್ನು ಎಸ್ಐಟಿ ಬಂಧಿಸಿದೆ.

ರಾಹುಲ್ ಗಾಂಧಿಗೆ ಜಾಮೀನು!

ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದಾರೆ ಎಂದು ಬಿಜೆಪಿ ಕರ್ನಾಟಕ ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ರಾಹುಲ್ ಗಾಂಧಿ ಇಂದು 42ನೇ ACMM ಕೋರ್ಟ್ ವಿಚಾರಣೆಗೆ ಖುದ್ಧ ಹಾಜರಾಗಿದ್ದರು. ರಾಹುಲ್ ಗಾಂಧಿ ಜಾಮೀನಿಗೆ 75 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಪತ್ರ ಭದ್ರತೆಯಾಗಿ ಸಲ್ಲಿಸಲಾಗಿದೆ. ಮಾಜಿ ಸಂಸದ ಡಿ.ಕೆ ಸುರೇಶ್ ಶ್ಯೂರಿಟಿ ನೀಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ಕೋರ್ಟ್ ಜೂನ್ 30ಕ್ಕೆ ಮುಂದೂಡಿದೆ. ಇದೇ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಗೆ ಜನವರಿ 1ರಂದು ಷರತ್ತು ಬದ್ಧ ಜಾಮೀನು ಸಿಕ್ಕಿತ್ತು.

ಉತ್ತರಾಖಂಡದಲ್ಲಿ ಮೃತಪಟ್ಟಿದ್ದ ಕರ್ನಾಟಕದ 9 ಮಂದಿ ಚಾರಣಿಗರ ಮೃತದೇಹ ಬೆಂಗಳೂರಿಗೆ ರವಾನೆ

ಉತ್ತರಾಖಂಡಕ್ಕೆ ಚಾರಣಕ್ಕೆ ತೆರಳಿದ್ದ ಕರ್ನಾಟಕದ 9 ಮಂದಿ ಹವಾಮಾನ ವೈಪರಿತ್ಯದ ಕಾರಣ ಹಿಮಪಾತಕ್ಕೆ ಸಿಲುಕಿ ಮೃತಪಟ್ಟವರ ಪೈಕಿ ಐವರ ಮೃತದೇಹಗಳನ್ನು ಇಂದು ಬೆಳಿಗ್ಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಗಿದೆ. ಮೃತ ಪದ್ಮಿನಿ ಹೆಗಡೆ, ವೆಂಕಟೇಶ್ ಪ್ರಸಾದ್ ಕೆ, ಆಶಾ, ಪದ್ಮನಾಭ ಕುಂದಾಪುರ ಕೃಷ್ಣಮೂರ್ತಿ, ಸಿಂಧೂ ವಾಕೇಕಾಲಮ್ ಎಂಬುವವರ ಕಳೇಬರವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಉಳಿದ ನಾಲ್ವರ ಮೃತದೇಹ ಇಂದು ಬೆಂಗಳೂರು ತಲುಪುವುದು ಎನ್ನಲಾಗಿದೆ. ಈಮಧ್ಯೆ, ಉತ್ತರಕಾಶಿಯ ಸಹಸ್ರತಾಲ್‌ನ ಹಿಮಪಾತದಲ್ಲಿ ಬದುಕುಳಿದ 13 ಮಂದಿ ಚಾರಣಿಗರು ಸುರಕ್ಷಿತವಾಗಿ ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಬೆಂಗಳೂರಿನಲ್ಲಿ ಅಪಘಾತ: ಅಕ್ಕ-ತಮ್ಮ ಸಾವು

ಬೆಂಗಳೂರಿನಲ್ಲಿ ವೇಗವಾಗಿ ಬಂದ ವಾಟರ್ ಟ್ಯಾಂಕರ್, ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾಲೇಜಿಗೆ ಹೊರಟಿದ್ದ ಅಕ್ಕ-ತಮ್ಮ ಸಾವನ್ನಪ್ಪಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡನಾಗಮಂಗಲದಲ್ಲಿ ನಡೆದಿದೆ. ದೊಡ್ಡ ನಾಗಮಂಗಲ ನಿವಾಸಿಗಳಾದ 20 ವರ್ಷದ ಮಧುಮಿತ ಮತ್ತು 18 ವರ್ಷದ ರಂಜನ್ ಮೃತ ದುರ್ದೈವಿಗಳು. ಬೆಂಗಳೂರಿನ ಎಸ್ಎಸ್ಎಂಆರ್‌ವಿ ಕಾಲೇಜಿನಲ್ಲಿ ಮಧುಮಿತ ವ್ಯಾಸಂಗ ಮಾಡುತ್ತಿದ್ದಳು. ಮೊದಲ ದಿನ ಅಕ್ಕನನ್ನು ಕಾಲೇಜಿಗೆ ಬಿಟ್ಟು ಬರಲು ತಮ್ಮ ಹೋಗುತ್ತಿದ್ದ. ಈ ವೇಳೆ ವಾಟರ್ ಟ್ಯಾಂಕರ್ ಇಬ್ಬರನ್ನೂ ಬಲಿ ಪಡೆದಿದೆ. ಮತ್ತೊಂದೆಡೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಬಳಿ ಕಾರೊಂದು ಕಾಲುವೆಗೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಕೆಪಿಟಿಸಿಎಲ್ ಸಿಬ್ಬಂದಿ ವೇಣಗೋಪಾಲ್, ಶ್ರೀಧರ್ ಹಾಗೂ ಬೆಸ್ಕಾಂ ಲೈನ್‌ಮ್ಯಾನ್ ಮಂಜಪ್ಪ ಎಂದು ಗುರುತಿಸಲಾಗಿದೆ.

ಚಂದನ್-ನಿವೇದಿತ ವಿಚ್ಛೇದನ?

ಗಾಯಕ ಚಂದನ್ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿರುವ ಹಿನ್ನಲೆಯಲ್ಲಿ ದಂಪತಿ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. 2017ರಲ್ಲಿ ಪ್ರಸಾರವಾದ ‘ಬಿಗ್ ಬಾಸ್ ಕನ್ನಡ ಸೀಸನ್ 5’ ಶೋನಲ್ಲಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಸ್ಪರ್ಧಿಗಳಾಗಿದ್ದರು. ಅಲ್ಲಿಂದ ಅವರಿಬ್ಬರ ಸ್ನೇಹ ನಂತರ ಪ್ರೀತಿಯಾಗಿ ಬದಲಾಗಿ, ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದರು. ಬಳಿಕ 2020 ಫೆಬ್ರವರಿ 26ರಂದು ಈ ಜೋಡಿ ಅದ್ಧೂರಿಯಾಗಿ ಪೋಷಕರ ಸಮುಖದಲ್ಲಿ ವಿವಾಹವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT