ಬೆಂಗಳೂರು: ಚಿತ್ರದುರ್ಗ ಮೂಲದ ಮೆಡಿಕಲ್ ಶಾಪ್ ನೌಕರ ಕೆ.ಎಸ್.ರೇಣುಕಾಸ್ವಾಮಿ (33ವ) ಹತ್ಯೆ ಪ್ರಕರಣದ ತನಿಖೆಯಲ್ಲಿ ನಟ ದರ್ಶನ್ ಸೇರಿ 12 ಮಂದಿಯನ್ನು ಬಂಧಿಸಿರುವ ವೇಳೆ ಪೊಲೀಸರ ಮುಂದೆ ಶರಣಾದ ನಾಲ್ವರು ಆರೋಪಿಗಳಿಂದ ಮಹತ್ವದ ಮಾಹಿತಿ ತನಿಖೆ ವೇಳೆ ಪೊಲೀಸರಿಗೆ ಸಿಕ್ಕಿದ್ದು ಪ್ರಕರಣದಲ್ಲಿ ನಟ ದರ್ಶನ್ ಹೆಸರನ್ನು ಬಹಿರಂಗಪಡಿಸದಿರಲು 20 ಲಕ್ಷ ರೂಪಾಯಿ ನೀಡಿದ್ದರು ಎಂದು ತಿಳಿದುಬಂದಿದೆ.
ಶನಿವಾರ ರಾತ್ರಿಯಿಂದ ಭಾನುವಾರ ನಸುಕಿನಲ್ಲಿ ಸುಮನಹಳ್ಳಿ ಸೇತುವೆ ಬಳಿಯ ಮಳೆನೀರು ಚರಂಡಿ ಬದಿಯಲ್ಲಿ ಶವ ಎಸೆದು ಹೋಗುವವರೆಗೆ ನಾಲ್ವರು ಆರೋಪಿಗಳ ಪೈಕಿ ಇಬ್ಬರಿಗೆ 10 ಲಕ್ಷ ರೂಪಾಯಿ ನೀಡಲಾಗಿತ್ತು. ನಾಲ್ವರು ಆರೋಪಿಗಳು ತಮಗೆ ನೀಡಿದ್ದ ಹಣ ಪಡೆದು ರೇಣುಕಾಸ್ವಾಮಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಸಾಲ ಸುಸ್ತಿದಾರರಿಂದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ತೊಡಗಿರುವ ಸಂಸ್ಥೆಯಲ್ಲಿ ಆರೋಪಿಗಳು ಕೆಲಸ ಮಾಡುತ್ತಿದ್ದರು. ರೇಣುಕಾಸ್ವಾಮಿಯನ್ನು ಶೆಡ್‌ನಲ್ಲಿ ಕೊಲೆ ಮಾಡಿದ್ದ ಜಮೀನನ್ನು ಸಂಸ್ಥೆಯು ಗುತ್ತಿಗೆಗೆ ತೆಗೆದುಕೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳಲ್ಲಿ ಒಬ್ಬನಾದ ದೀಪಕ್, ನಿಖಿಲ್ ನಾಯ್ಕ್ ಮತ್ತು ಕೇಶವಮೂರ್ತಿಗೆ ತಲಾ 5 ಲಕ್ಷ ರೂಪಾಯಿಗಳನ್ನು ಒಪ್ಪಂದದಂತೆ ಉಳಿದ 10 ಲಕ್ಷ ರೂಪಾಯಿಗಳನ್ನು ಕಾರ್ತಿಕ್ ಅಲಿಯಾಸ್ ಕಪ್ಪೆ ಮತ್ತು ರಾಘವೇಂದ್ರ ಜೈಲಿಗೆ ಹೋದ ನಂತರ ಅವರ ಕುಟುಂಬ ಸದಸ್ಯರಿಗೆ ನೀಡಬೇಕಿತ್ತು.
ಕೊಲೆಯಲ್ಲಿ 17 ಮಂದಿ ಭಾಗಿ: ನಾಲ್ವರು ಆರೋಪಿಗಳು ಶನಿವಾರ ರಾತ್ರಿಯಿಂದ ಶವ ವಿಲೇವಾರಿಯಾಗುವವರೆಗೂ ದರ್ಶನ್ ಜೊತೆ ವಾಟ್ಸಾಪ್ ಸಂಭಾಷಣೆ ನಡೆಸಿದ್ದಾರೆ ಎನ್ನಲಾಗಿದೆ. ಶರಣಾದ ಬಳಿಕ ಪೊಲೀಸರು ಅವರ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ದರ್ಶನ್ ಕೊಲೆಯಲ್ಲಿ ಭಾಗಿಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ. ಪೊಲೀಸರು ನಂತರ ಟವರ್ ಸ್ಥಳವನ್ನು ಪರಿಶೀಲಿಸಿದರು. ಅಪರಾಧದ ಸ್ಥಳದ ಬಳಿ ನಟ ದರ್ಶನ್ ಮೊಬೈಲ್ ಸಕ್ರಿಯವಾಗಿದ್ದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ಕೊಲೆ ಪ್ರಕರಣದ ಆರೋಪಿಗಳ ಸಂಖ್ಯೆ 17ಕ್ಕೆ ತಲುಪಿದೆ.
ನಟ ದರ್ಶನ್ ಗೆ ರಾಜಕೀಯ ಸಂಪರ್ಕಗಳು ಮತ್ತು ಅವರ ಅಪಾರ ಅಭಿಮಾನಿ ಬಳಗವನ್ನು ತಿಳಿದಿದ್ದರಿಂದ ಪೊಲೀಸರು ನಟನನ್ನು ವಶಕ್ಕೆ ಪಡೆಯುವ ಮೊದಲು ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಮನಹಳ್ಳಿ ಸೇತುವೆ ಬಳಿಯಿರುವ ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಸ್ಕಾರ್ಪಿಯೋ ಎಸ್‌ಯುವಿ ಚಲನವಲನದ ಮೇಲೆ ನಿಗಾ ಇಟ್ಟಿದ್ದರು. ಆರೋಪಿಗಳು ಶರಣಾದ ಬಳಿಕ ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ದರ್ಶನ್, ಅವರ ಸ್ನೇಹಿತೆ ಪವಿತ್ರಾ ಗೌಡ ಹಾಗೂ ಇತರರ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.
ಪೊಲೀಸರು ದೀಪಕ್ ಪೂರ್ವಾಪರವನ್ನು ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಪ್ರಕರಣದ ಆರೋಪಿಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದ್ದು, 13 ಮಂದಿಯನ್ನು ಬಂಧಿಸಲಾಗಿದೆ. ನಾಲ್ವರು ಆರೋಪಿಗಳನ್ನು ಜಗದೀಶ್ ಅಲಿಯಾಸ್ ಜಗ್ಗ, ಅನು, ರವಿ ಮತ್ತು ರಾಜು ಎಂದು ಗುರುತಿಸಲಾಗಿದ್ದು, ಅವರನ್ನು ಇನ್ನೂ ಬಂಧಿಸಬೇಕಿದೆ.
ನಿನ್ನೆ ಬುಧವಾರ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ಎದುರು ದರ್ಶನ್ ಅಭಿಮಾನಿಗಳು ಬೆಂಬಲವಾಗಿ ಘೋಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ದರ್ಶನ್ ನಿನ್ನೆ ರಾತ್ರಿ ಲಾಕ್ ಅಪ್ ನಲ್ಲಿ ಮಲಗದೇ ಚಿಂತಾಕ್ರಾಂತರಾಗಿ ಕಾಣುತ್ತಿದ್ದರು. ಮಂಗಳವಾರ ಪೂರ್ತಿ ಜ್ಯೂಸ್ ಸೇವಿಸಿದ್ದ ಅವರು ಬುಧವಾರ ಬೆಳಗ್ಗೆ ಇಡ್ಲಿ ಸೇವಿಸಿದ್ದರು ಎನ್ನಲಾಗಿದೆ.
ಪೊಲೀಸರು ದರ್ಶನ್, ಪವಿತ್ರಾ ಮತ್ತು ಇತರ ಆರೋಪಿಗಳನ್ನು ರೇಣುಕಾಸ್ವಾಮಿ ಕೊಲೆಯಾದ ಶೆಡ್‌ಗೆ ಸ್ಥಳ ಮಹಜರಿಗೆ ಕರೆದೊಯ್ದರು. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಠಾಣೆಗೆ ಭೇಟಿ ನೀಡಿ ಇದುವರೆಗೆ ನಡೆದಿರುವ ತನಿಖೆಗಳನ್ನು ಪರಿಶೀಲಿಸಿದರು.
ರೇಣುಕಾಸ್ವಾಮಿಗೆ ಮನೆಗೆ ಹೋಗಲು ದರ್ಶನ್ ಹಣ ಕೊಟ್ಟಿದ್ದರಾ?: ರೇಣುಕಾಸ್ವಾಮಿಯನ್ನು ಶೆಡ್‌ಗೆ ಕರೆತಂದ ನಂತರ ದರ್ಶನ್ ಮತ್ತು ಪವಿತ್ರಾ ಅಲ್ಲಿಗೆ ಹೋಗಿದ್ದರು. ಪವಿತ್ರಾ ತಮ್ಮ ಚಪ್ಪಲಿಯಿಂದ ಆತನಿಗೆ ಹೊಡೆದಿದ್ದಾರೆ ಎನ್ನಲಾಗಿದೆ. ಪವಿತ್ರಾಗೆ ಯಾವುದೇ ಸಂದೇಶ ಕಳುಹಿಸದಂತೆ ರೇಣುಕಾಸ್ವಾಮಿಗೆ ದರ್ಶನ್ ಎಚ್ಚರಿಕೆ ನೀಡಿ ಚಿತ್ರದುರ್ಗಕ್ಕೆ ಮರಳಲು ಹಣ ನೀಡಿದ್ದಾರೆ ಎನ್ನಲಾಗಿದೆ. ದರ್ಶನ್ ಮತ್ತು ಪವಿತ್ರಾ ಶೆಡ್‌ನಿಂದ ಹೊರಬಂದ ನಂತರ, ಇತರ ಆರೋಪಿಗಳು ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡುವುದನ್ನು ಮುಂದುವರೆಸಿದ್ದಾರೆ. ಆರೋಪಿಗಳಲ್ಲಿ ಒಬ್ಬನು ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಬಲವಾಗಿ ಏಟು ಕೊಟ್ಟಿದ್ದರಿಂದ ಆತ ಮೃತಪಟ್ಟಿದ್ದಾನೆ. ಸಂಗಡಿಗರಿಂದ ರೇಣುಕಾಸ್ವಾಮಿ ಸಾವಿನ ಬಗ್ಗೆ ಮಾಹಿತಿ ಪಡೆದ ದರ್ಶನ್, ಇಡೀ ಘಟನೆಗೆ ಪವಿತ್ರಾಳೇ ಕಾರಣ ಎಂದು ಆರೋಪಿಸಿ ಸಿಟ್ಟಿನಿಂದ ನಂತರ ಪವಿತ್ರಾ ಮೇಲೆ ಹಲ್ಲೆ ಮಾಡಿದ್ದರು. ಇದರಿಂದಾಗಿ ಪವಿತ್ರಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸೋಮವಾರ ಡಿಸ್ಚಾರ್ಜ್ ಮಾಡಲಾಗಿತ್ತು ಎಂದು ಹೇಳಲಾಗಿದೆ. ಘಟನೆ ಬಗ್ಗೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.