ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡದ ನಟ ದರ್ಶನ್ ರನ್ನು ಬಂಧಿಸಲಾಗಿದ್ದು ಕನ್ನಡ ಚಿತ್ರರಂಗದಿಂದ ದರ್ಶನ್ ಅವರನ್ನು ಬಹಿಷ್ಕರಿಸಿ ಎಂಬ ಆಗ್ರಹವು ಜಾಸ್ತಿಯಾಗುತ್ತಿದೆ.
ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ಎಂ ಸುರೇಶ್ ನೇತೃತ್ವದಲ್ಲಿ ಇಂದು ತುರ್ತುಸಭೆ ನಡೆಯುತ್ತಿದೆ. ಸಭೆಯಲ್ಲಿ 27ಕ್ಕೂ ಹೆಚ್ಚು ಸದಸ್ಯರು ಭಾಗಿಯಾಗುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಅವರನ್ನು ಚಿತ್ರರಂಗದಿಂದ ಬಹಿಷ್ಕರಿಸುವಂತೆ ಒತ್ತಡ ಹಾಕುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ದೇಶ ಮಟ್ಟದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಇನ್ನು ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದರೂ ದರ್ಶನ್ ವಿರುದ್ಧ ಯಾಕೆ ಕನ್ನಡ ಚಿತ್ರೋಧ್ಯಮ ಕ್ರಮಕೈಗೊಳ್ಳುತ್ತಿಲ್ಲ. ಕೊಲೆ ಆರೋಪಿಯಾಗಿದ್ದರೂ ದರ್ಶನ್ ಅವರನ್ನು ಚಿತ್ರೋಧ್ಯಮ ಪರೋಕ್ಷವಾಗಿ ಬೆಂಬಲಿಸುತ್ತಿದೆಯೇ ಎಂದು ಸಂಘಟನೆಗಳು ಪ್ರಶ್ನೆ ಮಾಡುತ್ತಿವೆ.
ಈ ಹಿನ್ನೆಲೆಯಲ್ಲಿ ಇಂದು ಫಿಲ್ಮ್ ಚೇಂಬರ್ ತುರ್ತುಸಭೆ ಕರೆದಿದ್ದು ಸಭೆಯಲ್ಲಿ ತೀವ್ರ ಚರ್ಚೆ ಬಳಿಕ ದರ್ಶನ್ ಅವರನ್ನು ಬ್ಯಾನ್ ಮಾಡಬೇಕೇ? ಬೇಡವೇ? ಎಂಬ ನಿರ್ಧಾರ ಪ್ರಕಟಿಸಲಿದೆ.
ಇನ್ನು ದರ್ಶನ್ ಹಲವು ಬೃಹತ್ ಬಜೆಟ್ ಚಿತ್ರಗಳಿಗೆ ಸಹಿ ಹಾಕಿದ್ದು ಡೇವಿಲ್ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು. ಈ ಹಿಂದೆ 'ತಾರಕ್' ಚಿತ್ರ ಮಾಡಿದ್ದ ಮಿಲನ ಸಿನಿಮಾ ಖ್ಯಾತಿಯ ಪ್ರಕಾಶ್ 'ಡೆವಿಲ್' ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣ ಮಾಡುತ್ತಿದ್ದಾರೆ. 'ಡೆವಿಲ್' ಕೇವಲ 25 ದಿನಗಳ ಕಾಲ ಶೂಟಿಂಗ್ ಆಗಿದೆ ಎಂಬ ಮಾಹಿತಿ ಇದೆ. ಮತ್ತೊಂದೆಡೆ 'ಸಿಂಧೂರ ಲಕ್ಷ್ಮಣ' ಚಿತ್ರಕ್ಕೂ ಸಹಿ ಹಾಕಿದ್ದರು. 'ಕ್ರಾಂತಿ' ನಿರ್ಮಾಪಕ ಬಿ.ಸುರೇಶ್ ನಿರ್ಮಾಣ ಹಾಗೂ ತರುಣ್ ಸುಧೀರ್ ನಿರ್ದೇಶನದ ಈ ಚಿತ್ರ ಇನ್ನೇನು ಶುರುವಾಗಬೇಕಿತ್ತು. ಈ ಮಧ್ಯೆ ಜೋಗಿ ಪ್ರೇಮ್ ನಿರ್ದೇಶನದ, ಕೆವಿಎನ್ ಪ್ರೋಡಕ್ಷನ್ ಅಡಿ ಮತ್ತೊಂದು ಬಿಗ್ ಬಜೆಟ್ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ ದರ್ಶನ್ ಬಂಧನದಿಂದಾಗಿ ನಿರ್ಮಾಪಕರು ಆತಂಕಕ್ಕೆ ಸಿಲುಕಿದ್ದಾರೆ.